ಬಳ್ಕುಂಜೆ : ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ 2024- 25 ನೇ ಸಾಲಿನ ಗ್ರಾಮಸಭೆಯು ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷೆ ಮಮತಾ ಡಿ. ಪೂಂಜಾ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮೊದಲು ಪಂಚಾಯತ್ ವ್ಯಾಪ್ತಿಯ ಕೊಲ್ಲೂರು ಆಯುರ್ವೇದಿಕ್ ಆಸ್ಪತ್ರೆ, ವೈದ್ಯರಾದ ಡಾ. ಶೋಭಾ ರಾಣಿ ರವರು ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡುತ್ತಿರುವಾಗ ಗ್ರಾಮಸ್ಥರು ಅಕ್ಷೇಪ ವ್ಯಕ್ತಪಡಿಸಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ದೊರಕುತ್ತಿಲ್ಲ ಹಾಗೂ ಆಸ್ಪತ್ರೆಯು ಪಂಚಾಯಿತಿಯಿಂದ ತುಂಬಾ ದೂರದಲ್ಲಿದ್ದು ಹಿರಿಯ ನಾಗರಿಕರಿಗೆ ವೃದ್ಧರಿಗೆ ಚಿಕಿತ್ಸೆಗೆ ತೆರಳಲುತೀವ್ರ ತೊಂದರೆಯಾಗಿದೆ ,ಕೊಲ್ಲೂರು ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ, ಪಾಪ ವೈದ್ಯಾಧಿಕಾರಿಗಳು ಆಸ್ಪತ್ರೆ ಅಭಿವೃದ್ಧಿಗೆ ಶ್ರಮಪಡುತ್ತಿದ್ದಾರೆ ಆದರೆ ಮೇಲಿನ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜಾ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೃಷಿ ಮಾಡಿದ ವಸ್ತುವಿಗೆ ಸರಿಯಾದ ಬೆಂಬಲವಿಲ್ಲ, ಕೃಷಿ ಮಾಡಲು ರೈತರಿಗೆ ವಿತರಿಸಿದ ಬೀಜ ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಹಂದಿ ಉಪಟಳದಿಂದ ಕಬ್ಬು ಬೆಳೆ ನಾಶವಾಗಿದೆ, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಆಗ ಅರಣ್ಯಾಧಿಕಾರಿ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಇ ಪೌತಿಕ್ ಹಾಗೂ ತೆರಿಗೆ ವಸೂಲಿ ಆಂದೋಲನಕ್ಕೆ ಗ್ರಾಮಸ್ಥರ ಬೆಂಬಲ ನೀಡಲು ಮನವಿ ಮಾಡಿದರು. ಬಳ್ಕುಂಜೆ ಬೈಲು ಪ್ರದೇಶದಲ್ಲಿ ತೋಡಿನ ಹೂಳೆತ್ತುವ ಬಗ್ಗೆ ಗ್ರಾಮಸ್ಥರ ಹಾಗೂ ಆಡಳಿತದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಅಧ್ಯಕ್ಷರು ಸಭೆಯನ್ನು ಹತೋಟಿಗೆ ತಂದು ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿ ನಡೆಸಲು ಎಲ್ಲರ ಬೆಂಬಲ ನೀಡಲು ಮನವಿ ಮಾಡಿದರು
ಪಶುವೈದ್ಯ ಇಲಾಖೆಯಿಂದ ನೀಡಲಾಗುವ ಹಸಿರುಹುಲ್ಲಿನ ಬೀಜ ಕಳಪೆ ಮಟ್ಟದ್ದಾಗಿದೆ, ಮೊಳಕೆ ಬರುವುದಿಲ್ಲ, ಹುಳ ಬಂದಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಉಳಿದಂತೆ ಪಂಚಾಯತ್ ವ್ಯಾಪ್ತಿಯ ಕವತ್ತಾರು ಎಸ್ ಟಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮನೆ ತೆರಿಗೆ ಹೆಚ್ಚಳ, ಕವತ್ತಾರು ಕುಡುಮುಗುರಿ ರಸ್ತೆ ನಿರ್ಮಾಣ,ಬಳ್ಕುಂಜೆ ಗ್ರಾ.ಪಂ.ಗೆ ವಾರಕ್ಕೊಮ್ಮೆ ಕಂದಾಯ ಇಲಾಖೆ ಅಧಿಕಾರಿ ಬರಬೇಕು, ಮಳೆಗೆ ಕೃಷಿ ಹಾನಿ ಸಂಭವಿಸಿದ್ದು ಪರಿಹಾರ ನೀಡಬೇಕು, ಕೃಷಿ ಹೊಂಡ ನಿರ್ಮಾಣಕ್ಕೆ ಸರಕಾರದಿಂದ ಸವಲತ್ತುಗಳ ಬಗ್ಗೆ ಚರ್ಚೆ ನಡೆಯಿತು.
ನೋಡಲ್ ಅಧಿಕಾರಿಯಾಗಿ ಪಶುವೈದ್ಯ ಡಾ. ವಿಶ್ವರಾಧ್ಯ, ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ನವೀನ ಚಂದ್ರ ಶೆಟ್ಟಿ, ಸದಸ್ಯರಾದ ದಿನೇಶ್ ಪುತ್ರನ್,ಆನಂದ ಕೊಲ್ಲೂರು ಪ್ರಶಾಂತ್, ಮರೀನಾ ಡಿಸೋಜಾ,ಸುರೇಖಾ,ಶಾಂತಾ ಪೂಜಾರಿ,ಗೀತಾ,ವನಜಾ ಕೋಟ್ಯಾನ್, ಅಭಿವೃದ್ಧಿ ಅಧಿಕಾರಿ ಜಗದೀಶ್ ಎಸ್. ಉಪಸ್ಥಿತರಿದ್ದು ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯದರ್ಶಿ ರಾಬರ್ಟ್ ಫ್ರಾನ್ಸಿಸ್ ಫೆರ್ನಾಂಡಿಸ್ ಧನ್ಯವಾದ ಅರ್ಪಿಸಿದರು.
Home Uncategorized ಬಳ್ಕುಂಜೆ ಗ್ರಾಮ ಪಂಚಾಯತ್ ಗ್ರಾಮಸಭೆ: ಕಾಡುಹಂದಿ ಉಪಟಳದಿಂದ ಕಬ್ಬು ಬೆಳೆ ನಾಶ-ಸೂಕ್ತ ಕ್ರಮಕ್ಕೆ ಒತ್ತಾಯ