ಹೆಬ್ರಿ : ಸರಕಾರದ ಮುಜುರಾಯಿ ಇಲಾಖೆಗೆ ಒಳಪಟ್ಟ ಮುದ್ರಾಡಿ ಗ್ರಾಮದ ಅತ್ಯಂತ ಪುರಾತನ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ದಾರದ ಪ್ರಯುಕ್ತ ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳು ಜು. 31 ರಂದು ದೇವಸ್ಥಾನದಲ್ಲಿ ಪ್ರಾರಂಭಗೊಂಡಿತು.
ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಕ್ಕಾಗಿ ದೈವಜ್ಞರ ಮಾರ್ಗದರ್ಶನದಂತೆ ಕ್ಷೇತ್ರದ ತಂತ್ರಿಗಳಾದ ಕಬ್ಬಿನಾಲೆ ವೇದಮೂರ್ತಿ ವಿದ್ವಾನ್ ರಾಮಚಂದ್ರ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಪೂಜೆಗಳೊಂದಿಗೆ ಪ್ರಾಯಶ್ಚಿತ್ತಾದಿ ಮತ್ತು ಮುಷ್ಟಿಕಾಣಿಕೆ ಕಾರ್ಯಕ್ರಮಗಳು ಗುರುವಾರದಿಂದ ಪ್ರಾರಂಭಗೊಂಡು ಭಾನುವಾರ ದವರೆಗೆ ನಡೆಯುತ್ತಿದೆ.
ಧಾರ್ಮಿಕ ಸಭೆಯಲ್ಲಿ ವಿದ್ವಾನ್ ಮುಟ್ಲುಪಾಡಿ ರಾಘವೇಂದ್ರ ಭಟ್ ಉಪನ್ಯಾಸ ನೀಡುತ್ತಾ, ಗ್ರಾಮವೆಂಬುದು ಸುಗ್ರಾಮವಾಗಬೇಕೇ ಹೊರತು ಕುಗ್ರಾಮವಾಗಬಾರದು. ಗ್ರಾಮದಲ್ಲಿ ಎಷ್ಟೇ ಸೌಕರ್ಯವಿದ್ದರೂ ಶಾಲೆ ಮತ್ತು ದೇವಸ್ಥಾನ ಸುಸ್ಥಿತಿಯಲ್ಲಿ ಇದ್ದರೆ ಮಾತ್ರ ಸುಗ್ರಾಮವೆಂದು ಕರೆಸಿ ಕೊಳ್ಳುತ್ತದೆ, ಸಾಮಾಜಿಕ ಜ್ಞಾನವನ್ನು ಕೊಡುವುದು ಶಾಲೆಯಾದರೆ ಒಳಗಿನ ಜ್ಞಾನವನ್ನು ಕೊಡುವುದು ದೇವಸ್ಥಾನಗಳು, ಇವೆರಡನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳುವುದೇ ನಮ್ಮಲ್ಲರ ಜವಾಬ್ದಾರಿಯಾಗಿದೆ. ಸುಮಾರು 600 ವರ್ಷಗಳ ಹಿಂದಿನ ಈ ದೇವಸ್ಥಾನ ಮತ್ತು ಗರಡಿ ಜೀರ್ಣಾವಸ್ಥೆಯಲ್ಲಿದ್ದು, ಜೀರ್ಣೋದ್ದಾರಗೊಂಡಾಗ ಊರಿನ ಜನರು ಸಂಪತ್ತು ಹೊಂದಿ ಸುಖ ಶಾಂತಿಯಲ್ಲಿ ಬಾಳಲು ಸಾಧ್ಯವಾಗುತ್ತದೆ, ಇದೀಗ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವ ಸುಯೋಗ ನಮಗೆಲ್ಲ ಒದಗಿಬಂದಿದೆ, ನಾವೆಲ್ಲ ಪುಣ್ಯವಂತರು ಭಗವದ್ಭಕ್ತರಾದ ನಾವೆಲ್ಲ ಮುಷ್ಟಿ ಕಾಣಿಕೆ ಸಮರ್ಪಿಸಿ ಹಿರಿಯರು ಕಿರಿಯರೆನ್ನದೆ ತನು ಮನ ಧನದ ಸಹಕಾರ ನೀಡಿ, ಜೀರ್ಣೋದ್ದಾರದ ಕರಸೇವೆಯಲ್ಲಿ ತೊಡಗಿಸಿ ಕೊಂಡು ದೇವರ ಕೃಪೆಗೆ ಪಾತ್ರರಾಗುವ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಕೊಳಂಬೆ ಉದಯ ಹೆಗ್ಡೆ ವಹಿಸಿದ್ದು ಜೀರ್ಣೋದ್ದಾರ ಕಾರ್ಯ ಎಲ್ಲರ ಸಹಕಾರದಿಂದ ಸುಗಮವಾಗಿ ನಡೆಯಲಿ ಎಂದರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಿವಾಕರ ಎನ್.ಶೆಟ್ಟಿಯವರು ಮುಷ್ಟಿಕಾಣಿಕೆ ಕಾರ್ಯಕ್ರಮಕ್ಕೆ ತಂತ್ರಿ,ಅರ್ಚಕ ವರ್ಗ ರೊಂದಿಗೆ ದೇವರಲ್ಲಿ ಪ್ರಾರ್ಥಿಸಿ ಚಾಲನೆ ನೀಡಿದರು, ಪಂಜ ಭಾಸ್ಕರ್ ಭಟ್ ಶುಭಾಂಶನೆಗೈದರು. ಮುನಿಯಾಲು ಕೃಷ್ಣ ಚಾರಿಟೇಬಲ್ ಅಧ್ಯಕ್ಷ ರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶುಭಧರ ಶೆಟ್ಟಿ, ಗರಡಿ ಮುಕ್ಕಾಲು ಶೆಟ್ರು ಜಯಕರ ಶೆಟ್ಟಿ, ಗರಡಿ ಅರ್ಚಕ ರಾದ ಸಂತೋಷ್ ಆರ್. ಪೂಜಾರಿ, ತಂತ್ರಿಗಳಾದ ರಾಮ ಚಂದ್ರ ಭಟ್,ಅರ್ಚಕರಾದ ಶ್ರೀಶ ಭಟ್, ಪ್ರಸನ್ನ ಶೆಟ್ಟಿ, ಸುಧಾಕರ ಕುಲಾಲ್,ಉದ್ಯಮಿ ವಿಜಯ ಹೆಗ್ಡೆ,ಉದ್ಯಮಿ ಅರುಣ್ ಹೆಗ್ಡೆ,ಅರ್ಧನಾರಿಶ್ವರ ಭಜನಾ ಮಂಡಳಿಯ ಪುರುಷ ಮತ್ತು ಮಹಿಳಾ ತಂಡದ ಅಧ್ಯಕ್ಷರಾದ ವಸಂತ ಮತ್ತು ಸರಿತಾ ಹಾಗೂ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ಎಲ್ಲಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಕಾಪೋಳಿ ಶ್ರೀಧರ್ ಹೆಬ್ಬಾರ್ ಸ್ವಾಗತಿಸಿ ನಿರೂಪಿಸಿದರು. ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು,ಊರಿನ ಮತ್ತು ಪರವೂರಿನಲ್ಲಿದ್ದ ಸಾವಿರಾರು ಭಕ್ತರು ಮುಷ್ಟಿ ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು,ಮದ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.