ಮಂಗಳೂರು: ಪ್ರಸಕ್ತ ಹಣಕಾಸು ವರ್ಷದ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾ ರೂ. 4,541 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಗಳಿಸಿದ 4,458 ಕೋಟಿ ರೂಪಾಯಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 1.9ರಷ್ಟು ಏರಿಕೆ ದಾಖಲಾಗಿದೆ. ನಿವ್ವಳ ಬಡ್ಡಿ ವರಮಾನವು 11,435 ಕೋಟಿ ರೂಪಾಯಿಗೆ ತಲುಪಿದೆ.
ಈ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್‍ನ ಕಾರ್ಯಾಚರಣೆ ಲಾಭವು ಶೇ 15ರಷ್ಟು ಹೆಚ್ಚಳಗೊಂಡು ರೂ. 8,236 ಕೋಟಿಗಳಿಗೆ ತಲುಪಿದೆ. ಠೇವಣಿಗಳ ಸಂಗ್ರಹವು ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಶೇ 8.1ರಷ್ಟು ಏರಿಕೆಯಾಗಿ 12,04,283 ಕೋಟಿ ರೂಪಾಯಿಗೆ ತಲುಪಿದೆ. ಬಡ್ಡಿಯೇತರ ವರಮಾನವು ಶೇಕಡ 88ರಷ್ಟು ಹೆಚ್ಚಳಗೊಂಡು ರೂ. 4,675 ಕೋಟಿಗೆ ತಲುಪಿ ನಿವ್ವಳ ಲಾಭ ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಪ್ರಕಟಣೆ ಹೇಳಿದೆ.
ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‍ಪಿಎ) ಶೇ 0.60ರಷ್ಟು ಕಡಿಮೆಯಾಗಿ ಶೇಕಡ 2.28ರಷ್ಟಕ್ಕೆ ಇಳಿದಿದೆ. ಬ್ಯಾಂಕ್‍ನ ನಿವ್ವಳ ವಸೂಲಾಗದ ಸಾಲದ (ಎನ್‍ಎನ್‍ಪಿಎ) ಪ್ರಮಾಣವು ಕೂಡ ಶೇ 0.09ರಷ್ಟು ಕಡಿಮೆಯಾಗಿ ಶೇಕಡ 0.69 ರಿಂದ ಶೇ 0.60ಕ್ಕೆ ಇಳಿದಿದೆ. ಬ್ಯಾಂಕ್‍ನ ಒಟ್ಟಾರೆ ಸಾಲ ನೀಡಿಕೆ ಪ್ರಮಾಣವು ಶೇಕಡ 12.6ಕ್ಕೆ ಹೆಚ್ಚಳಗೊಂಡಿದೆ. ಇದಕ್ಕೆ ರಿಟೇಲ್ ಸಾಲ ನೀಡಿಕೆ ಪ್ರಮಾಣದಲ್ಲಿನ ಗಮನಾರ್ಹ ಹೆಚ್ಚಳವು ಪ್ರಮುಖ ಕೊಡುಗೆ ನೀಡಿದೆ. ಬ್ಯಾಂಕ್ ವಿತರಿಸಿದ ಸಾಲಗಳಲ್ಲಿ ಅಡಮಾನ ಸಾಲ (ಶೇ 18.6), ವಾಹನ ಸಾಲ (ಶೇ 17.9), ಗೃಹ ನಿರ್ಮಾಣ ಸಾಲ (ಶೇ 16.5), ಶಿಕ್ಷಣ ಸಾಲ (ಶೇ 15.4) ಮತ್ತು ವೈಯಕ್ತಿಕ ಸಾಲವು ಶೇ 19.5ರಷ್ಟು ಏರಿಕೆ ದಾಖಲಿಸಿವೆ ಎಂದು ವಿವರಿಸಿದೆ.