ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಮಂಜುರಾತಿ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌದಿಯಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ ಕಕ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆಯ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಮಾತನಾಡಿ, ಸರಕಾರ ಮಾಡದಂತ ಕೆಲಸವನ್ನು ಪೂಜ್ಯ ವೀರೇಂದ್ರ ಹೆಗ್ಡೆಯವರು ಮಾಡುತ್ತಿದ್ದು ಈ ಮೂಲಕ ಸುಭಿಕ್ಷ ಸಮಾಜ ನಿರ್ಮಿಸಿ ದೇಶ ಕಟ್ಟುವ ಕಾರ್ಯ ಮಾಡುತ್ತಿದ್ದು, ಅವರ ದೂರದೃಷ್ಟಿಯ ಯೋಜನೆಗಳಿಗೆ ನಾವು ಸಹಕಾರ ನೀಡಬೇಕಾಗಿದ್ದು, ಹೆಡ್ಡೆ ಹಾಗೂ ಕ್ಷೇತ್ರಕ್ಕೆ ಕಳಂಕ ತರಲು ಪ್ರಯತ್ನಿಸುವವರ ವಿರುದ್ಧ ಸಮಾಜ ಸೆಟೆದು ನಿಲ್ಲಬೇಕು ಎಂದರು.
ಜ್ಞಾನದೀಪ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಮಂಜುರಾತಿ ಪತ್ರ ವಿತರಣೆ ಮಾಡಿ ಮಾತನಾಡಿದ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡಿ ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 1060 ಜ್ಞಾನದೀಪ ಶಿಕ್ಷಕರನ್ನು ಧರ್ಮಸ್ಥಳ ಯೋಜನೆಯ ಮೂಲಕ ಒದಗಿಸಿದ್ದು, ಅವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 146 ಶಿಕ್ಷಕರನ್ನು ಆಯ್ದ ಶಾಲೆಗಳಿಗೆ ನೀಡಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಹಕಾರಿ ಆಗಿದ್ದರ ಜೊತೆಗೆ ಶಿಕ್ಷಕ ವೃತ್ತಿ ಕಲಿತು ಉದ್ಯೋಗ ವಂಚಿತ ಸುಮಾರು 1060 ಮಂದಿಗೆ ಉದ್ಯೋಗ ದೊರೆಯುವಂತಾಗಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಜನಜಾಗೃತಿ ವೇದಿಕೆ ಸದಸ್ಯರಾದ ಸದಾನಂದ ನಾವುರ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಬಂಟ್ವಾಳದ ನೋಣಯ್ಯ ನಾಯ್ಕ, ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಸಂಘಟನಾ ಕಾರ್ಯದರ್ಶಿ ಹರೀಶ್ ಕುದನೆ, ಕಾಡಬೆಟ್ಟು ಶೌರ್ಯ ಘಟಕದ ಪ್ರತಿನಿಧಿ ಪ್ರವೀಣ್ ಕುಮಾರ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನಲ್ಲಿ ಆಯ್ಕೆಯಾದ ಜ್ಞಾನದೀಪ ಶಿಕ್ಷಕರು, ಆಯ್ಕೆಯಾದ ಶಾಲೆಗಲ್ಲ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು, ಸುಜ್ಞಾನನಿದ್ದಿ ಶಿಷ್ಯವೇತನಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ತಾಲೂಕು ಯೋಜನಾಧಿಕಾರಿ ಜಯನಂದ ಪಿ ಕಾರ್ಯಕ್ರಮ ನಿರೂಪಿಸಿದರು.