
ಬೆಂಗಳೂರು : ರಿಹ್ಯಾಬಿಲಿಟೇಷನ್ ಸೆಂಟರ್ನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಯುವಕರು ದರೋಡೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಮೊದಲು ಕದ್ದ ಮೊಬೈಲ್ ಬಳಸಿ ರ್ಯಾಪಿಡೋ ಆಟೋ ಸೇವೆಯನ್ನು ಬುಕ್ ಮಾಡಿದ್ದು, ನಂತರ ಚಾಲಕನನ್ನು ಏಕಾಂಗಿ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಅವರು ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಆಟೋ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಾಗಲೂರು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳುವಾದ ಆಟೋ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಹಿನ್ನೆಲೆ, ರಿಹ್ಯಾಬ್ ಸೆಂಟರ್ನಿಂದ ತಪ್ಪಿಸಿಕೊಂಡ ಪರಿಸ್ಥಿತಿ ಹಾಗೂ ಇನ್ನಷ್ಟು ಅಪರಾಧಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
