ದೊಡ್ಡ ಕನಸುಗಳೇ ಯಶಸ್ಸಿನ ಮೊದಲ ಹೆಜ್ಜೆ : ಆತ್ಮಿಕಾ ಅಮಿನ್

0
8

ಮಂಗಳೂರು : “ದೊಡ್ಡ ಕನಸುಗಳು ನಮ್ಮದಾಗಲಿ ಮತ್ತು ಅವುಗಳನ್ನು ಸಾಧಿಸಲು ಅವಿರತವಾಗಿ ಪ್ರಯತ್ನಿಸೋಣ” ಎಂದು ಮಂಗಳೂರಿನ ಜೆ.ವಿ. ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕರಾದ ಆತ್ಮಿಕಾ ಅಮಿನ್ ಕರೆ ನೀಡಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಆಯೋಜಿಸಲಾದ ‘ಶಕ್ತಿ’ ಮಹಿಳಾ ಸಬಲೀಕರಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಉದ್ಯಮಶೀಲತೆಯ ಕಡೆಗೆ ಮುಖ ಮಾಡಬೇಕು. ಮಹಿಳೆಯರಲ್ಲಿ ಅಪಾರವಾದ ಅಂತರ್ಗತ ಕೌಶಲ್ಯವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಉದ್ಯಮಶೀಲತೆ ಎಂದರೆ ಸೋಲುಗಳನ್ನು ಭಯಪಡದೇ ಅವುಗಳಿಂದ ಪಾಠ ಕಲಿದು ಮುಂದುವರಿಯುವುದೇ ಆಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಅನೇಕ ಮಾಹಿತಿಗಳು ಹಾಗೂ ಅವಕಾಶಗಳು ಲಭ್ಯವಿದ್ದು, ಅವುಗಳನ್ನು ವಿವೇಕಪೂರ್ವಕವಾಗಿ ಬಳಸಿಕೊಳ್ಳಬೇಕು. ಮಹಿಳೆಯರು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಉನ್ನತ ಸ್ಥಾನವನ್ನು ತಲುಪಲು ಗುರಿಯನ್ನು ಸಾಧಿಸುವ ದೃಢ ಆತ್ಮಸ್ಥೈರ್ಯ ಅತ್ಯಗತ್ಯ ಎಂದು ಆತ್ಮಿಕಾ ಅಮಿನ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಮಂಗಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಅನಿತಾ ಜಿ. ಭಟ್ ಮಾತನಾಡಿ, “ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟು ಮಹಿಳೆಯರಿದ್ದಾರೆ. ಮಹಿಳಾ ಸಬಲೀಕರಣವಾಗದೇ ದೇಶದ ಸಬಲೀಕರಣ ಸಾಧ್ಯವಿಲ್ಲ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಇಂದು ಮುಂಚೂಣಿಯಲ್ಲಿದ್ದಾರೆ. ಯುವ ಜನಾಂಗವು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ. ಮಹಿಳಾ ಸಬಲೀಕರಣವಾದಾಗ ಮಾತ್ರ ರಾಷ್ಟ್ರದ ಬೆಳವಣಿಗೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿಶೇಷ ಅವಧಿಗಳು ಹಾಗೂ ಸಂವಾದ

ಕಾರ್ಯಕ್ರಮದ ಮೊದಲ ಅವಧಿಯಲ್ಲಿ ಸ್ವಾಮಿ ಜ್ಞಾನೀಶಾನಂದಜಿ ಅವರು “Education that Empowers – The Vivekananda Vision for Women” ವಿಷಯದ ಕುರಿತು ಮಾತನಾಡಿದರು. ಎರಡನೇ ಅವಧಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಸಂಚಾಲಕರಾದ ಡಾ. ಗ್ರೀಷ್ಮಾ ವಿವೇಕ್ ಆಳ್ವ ಅವರು “Leading with Shakti: Redefining Women’s Leadership in the 21st Century” ಎಂಬ ವಿಷಯ ಮಂಡಿಸಿದರು.

ನಂತರ “The Power to Care: Redefining Strength and Service in Today’s Women” ವಿಷಯದ ಕುರಿತ ಸಂವಾದ ನಡೆಯಿತು. ಈ ಸಂವಾದದಲ್ಲಿ ಮಂಗಳೂರಿನ Khadi’s Spices ಸಂಸ್ಥೆಯ ಸ್ಥಾಪಕಿ ಹಾಗೂ ಸಿಇಒ ದಿವ್ಯಾ ರೈ, ಅನಿರ್ವೇದ ಫೌಂಡೇಶನ್‌ನ ಅನುಪಮಾ ವಿ. ಪ್ರಭು ಹಾಗೂ ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಪ್ರಶಸ್ತಿ ಪುರಸ್ಕೃತ ಕ್ಲಿನಿಕಲ್ ಸೈಕಾಲಜಿಸ್ಟ್ ಪ್ರಿಸಿಲ್ಲಾ ರೋಡ್ರಿಗ್ಸ್ ಭಾಗವಹಿಸಿದರು. ಸಂವಾದವನ್ನು ಪುತ್ತೂರಿನ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ. ಅವರು ನಿರ್ವಹಿಸಿದರು.

600 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗಿ

ಈ ವಿಚಾರ ಸಂಕಿರಣದಲ್ಲಿ ಮಂಗಳೂರಿನ ನೀರುಮಾರ್ಗದ ಮಂಗಳಾ ಸಮೂಹ ಸಂಸ್ಥೆಗಳು ಹಾಗೂ ಕುಡುಪುವಿನ ತೇಜಸ್ವಿನಿ ಕಾಲೇಜ್ ಆಫ್ ನರ್ಸಿಂಗ್‌ನ 600 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪ್ಪಾಡಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲರಾದ ಪ್ರೊ. ಪ್ರತಿಜ್ಞಾ ಸುಹಾಸಿನಿ ವಂದಿಸಿದರು. ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಶರಣ್ಯ ಯು.ಆರ್. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here