ಕ್ವಿಕ್ ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಡೆಲಿವರಿ ಸಿಬ್ಬಂದಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಮಧ್ಯಸ್ಥಿಕೆ ಹಾಗೂ ಮಾತುಕತೆಗಳ ಫಲವಾಗಿ, ಪ್ರಮುಖ ಡೆಲಿವರಿ ಅಗ್ರಿಗೇಟರ್‌ಗಳು ಕಡ್ಡಾಯ 10 ನಿಮಿಷ ಡೆಲಿವರಿ ಗಡುವನ್ನು ತೆಗೆದುಹಾಕಲು ಒಪ್ಪಿಕೊಂಡಿವೆ ಎಂದು ಮೂಲಗಳು ಮಂಗಳವಾರ ಮಾಹಿತಿ ನೀಡಿವೆ.
ಈ ಸಂಬಂಧ ಬ್ಲಿಂಕಿಟ್, ಜೆಪ್ಟೋ, ಜೋಮಾಟೊ, ಸ್ವಿಗ್ಗಿ ಸೇರಿದಂತೆ ಪ್ರಮುಖ ವೇದಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದು, ಡೆಲಿವರಿ ಸಮಯದ ಗಡುವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ಸಭೆಯಲ್ಲಿ, 10 ನಿಮಿಷ ಡೆಲಿವರಿ ಗಡುವು ಡೆಲಿವರಿ ರೈಡರ್‌ಗಳ ಮೇಲೆ ಮಾನಸಿಕ ಹಾಗೂ ದೈಹಿಕ ಒತ್ತಡ ಸೃಷ್ಟಿಸುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಅಪಾಯ ಹೆಚ್ಚುತ್ತಿದೆ ಎಂಬ ಅಂಶವನ್ನು ಸಚಿವ ಮನ್ಸುಖ್ ಮಾಂಡವಿಯಾ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ಗ್ರಾಹಕರ ಅನುಕೂಲತೆ ಮಹತ್ವವಾದರೂ, ಅದಕ್ಕಿಂತ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಮುಖ್ಯ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಡೆಲಿವರಿ ಸಮಯ ವಿಸ್ತರಣೆಗೆ ಚಿಂತನೆ- ಸಚಿವರ ಸೂಚನೆಯ ಹಿನ್ನೆಲೆ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಲ್ಟ್ರಾ-ಫಾಸ್ಟ್ ಡೆಲಿವರಿ ಮಾದರಿಯನ್ನು ಕಡ್ಡಾಯವಾಗಿ ಹೇರುವುದನ್ನು ಕೈಬಿಡಲು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಡೆಲಿವರಿ ಸಮಯವನ್ನು ಹೆಚ್ಚು ವಾಸ್ತವಿಕ ಹಾಗೂ ಸುರಕ್ಷಿತ ರೀತಿಯಲ್ಲಿ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಯಲಿದೆ. ಡೆಲಿವರಿ ಉದ್ಯೋಗಿಗಳ ಸಂಘಗಳು ಮತ್ತು ಕಾರ್ಮಿಕ ಹಿತೈಷಿಗಳು ಈ ತೀರ್ಮಾನವನ್ನು ಸ್ವಾಗತಿಸಿದ್ದು, ಇದು ಲಕ್ಷಾಂತರ ಗಿಗ್ ವರ್ಕರ್‌ಗಳ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸ ವರ್ಷಾಚರಣೆ ದಿನವೇ ಡೆಲಿವರಿ ಸಿಬ್ಬಂದಿ ಮುಷ್ಕರಕ್ಕೆ ಕರೆ, ಆನ್‌ಲೈನ್ ಸೇವೆಯಲ್ಲಿ ವ್ಯತ್ಯಯ, ಬೇಡಿಕೆಗಳು- ಗ್ರಾಹಕ ಸೇವೆಯ ಹೆಸರಿನಲ್ಲಿ ಕಾರ್ಮಿಕರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಈ ತೀರ್ಮಾನದ ಮೂಲಕ ಸ್ಪಷ್ಟಪಡಿಸಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್ ಆಧಾರಿತ ಉದ್ಯೋಗಗಳಲ್ಲಿ ಮಾನವೀಯ ದೃಷ್ಟಿಕೋನಕ್ಕೆ ಆದ್ಯತೆ ನೀಡುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

