ಮಂಗಳೂರು: ವಾಹನ ಪರವಾನಗಿ ಮರಳಿ ನೀಡಲು 50 ಸಾವಿರ ರೂ. ಲಂಚದ ಬೇಡಿಕೆಯಿರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಪ್ರಕರಣ ಸಂಬಂಧ 5 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲಿಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ. ತಸ್ಲಿಂ ಮತ್ತು ವಿನೋದ್ ಅವರ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೌನವಹಿಸಿದ್ದ ಇತರ ಮೂವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ನಂತೂರು ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ತಸ್ಲಿಂ, ಕಾರು, ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ಸೂಚಿಸಿದ್ದು, ಅದರಂತೆ ಕಾರಿನ ಮಾಲಕರು ಎಲ್ಲವನ್ನೂ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಬಳಿಕ ತನ್ನ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಳ್ಳಲು ಹೋದಾಗ ಹೆಡ್ ಕಾನ್ಸ್‌ಟೇಬಲ್ ತಸ್ಲಿಂ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾರಿನ ಮಾಲಕರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚರ್ಚೆಯ ಬಳಿಕ ರೂ. 5000 ಲಂಚ ಸ್ವೀಕರಿಸಿದ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಕೈಗೆ ಸಿಕ್ಕಿ ಬಿದ್ದಿದ್ದರು. ಈ ಬಗ್ಗೆ ಕದ್ರಿ ಠಾಣೆಯ ಇಬ್ಬರು ಹೆಡ್‌ಕಾನ್ಸ್‌ಟೇಬಲ್‌ಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ತಸ್ಲಿಂನನ್ನು ಬಂಧಿಸಿದ್ದಾರೆ.