ಭೀಕರ ಸುಂಟರಗಾಳಿಯಿಂದ ಕಾಪು ಮತ್ತು ಕಾರ್ಕಳ ತಾಲೂಕಿನಾದ್ಯಂತ ಆಗಿರುವ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಗ್ರಹ

0
20

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರು ಮತ್ತು ಕಾರ್ಕಳ ತಾಲೂಕಿನ ಬೆಳ್ಮಣ್, ನಂದಳಿಕೆ, ಸೂಡ, ರೆಂಜಾಳ, ಬೈಲೂರು, ಯರ್ಲಪಾಡಿ ಮುಂತಾದ ಪ್ರದೇಶಗಳಲ್ಲಿ ಆ.18ರಂದು ಬೀಸಿದ ಬೀಕರ ಸುಂಟರ ಗಾಳಿಯಿಂದ ಸುಮಾರು ಒಂದೂವರೆ ಕಿ.ಮೀ. ಅಗಲ ಹಾಗೂ ಏಳೆoಟು ಕಿ.ಮೀ. ಉದ್ದಕ್ಕೆ ಸಾಲು ಸಾಲು ಮರಗಳು ಉರುಳಿ ಬಿದ್ದು ಅನೇಕ ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಅಪಾರ ಹಾನಿ ಸಂಭವಿಸಿದ್ದು, ಸದ್ರಿ ಪ್ರಕೃತಿ ವಿಕೋಪವನ್ನು ಜಿಲ್ಲೆಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಆದ್ಯತೆ ಮೇರೆಗೆ ತುರ್ತು ಪರಿಹಾರವನ್ನು ಒದಗಿಸುವಂತೆ, ಸ್ಥಳಕ್ಕೆ ಬೇಟಿ ನೀಡಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾರ್ಕಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಬೆಳ್ಮಣ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿಯೂ ಸದ್ರಿ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ ತುರ್ತು ಅನುದಾನವನ್ನು ಮಂಜೂರು ಮಾಡುವರೆ ಶಿಫಾರಸು ಮಾಡುವಂತೆ ಅವರು ಒತ್ತಾಯಿಸಿದರು.

ಇದರೊಂದಿಗೆ ಹಲವಾರು ವಿದ್ಯುತ್ ಕಂಬಗಳು ಕೂಡಾ ಧರಾಶಾಯಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಮೂಲಕ ತುರ್ತು ಪರಿಹಾರ ಮಾರ್ಗೋಪಾಯವನ್ನು ಒದಗಿಸುವಂತೆ ಕುತ್ಯಾರು ಮನವಿ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಪಕ್ಷದ ಪ್ರಮುಖರಾದ ಶಿವರಾಮ ಭಂಡಾರಿ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here