ಬೀರಬ್ಬಿ : ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಮನೆಯ ಹಿಂಭಾಗದಲ್ಲೇ ಎಸೆಯಲಾಗಿದ್ದು, ಇಡೀ ಗ್ರಾಮವೇ ಈ ಘಟನೆಯಿಂದ ಬೆಚ್ಚಿಬಿದ್ದಿದೆ.
ಕೊಲೆಯಾದ ದುರ್ದೈವಿಯನ್ನು 25 ವರ್ಷದ ಬೀರೇಶ್ ಎಂದು ಗುರುತಿಸಲಾಗಿದ್ದು, ಈತ ಕಳೆದ ಎರಡು ವಾರಗಳಿಂದ ಕಾಣೆಯಾಗಿದ್ದರಿಂದ ಕುಟುಂಬದವರು ಆತಂಕಗೊಂಡು ಹುಡುಕಾಟ ನಡೆಸುತ್ತಿದ್ದರು. ಬುಧವಾರ ಸಂಜೆ ಮನೆಯ ಹಿಂಭಾಗದಲ್ಲಿ ಯಾವುದೋ ಪ್ರಾಣಿ ಸತ್ತಂತೆ ಅಸಹನೀಯ ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಅಲ್ಲಿ ಪತ್ತೆಯಾದ ಪ್ಲಾಸ್ಟಿಕ್ ಚೀಲವನ್ನು ಬಿಚ್ಚಿ ನೋಡಿದಾಗ ಮಗನ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಗಳು ಬೀರೇಶ್‌ನ ದೇಹದ ಭಾಗಗಳನ್ನು ಹಲವು ತುಂಡುಗಳಾಗಿ ಕತ್ತರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಕಂಡುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಎಸ್ಪಿ ಜಾಹ್ನವಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವು ಸಂಪೂರ್ಣವಾಗಿ ಕೊಳೆಯುತ್ತಿದ್ದುದರಿಂದ ಸ್ಥಳದಲ್ಲೇ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಅಮಾನುಷ ಕೃತ್ಯ ಎಸಗಿದ ಕಿರಾತಕರು ಯಾರು ಮತ್ತು ಕೊಲೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಂಕಿತರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

