ಗ್ವಾಲಿಯರ್: ಆಕೆಗೆ ಏನೋ ಕಚ್ಚಿದೆ ನೋಡಿ ಎಂದು ಹೇಳುತ್ತಾ ಆಸ್ಪತ್ರೆಯ ಬಾಗಿಲಿನವರೆಗೆ ಲಿವ್- ಇನ್ ಸಂಗಾತಿಯನ್ನು ಎತ್ತಿಕೊಂಡು ಬಂದಿದ್ದ ಗೆಳೆಯ ಆಕೆಯನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಚೇತನ್ ಕುಕ್ರೇಜಾ ಎಂಬ ಯುವಕ ಮತ್ತು ಬಿಹಾರ ಮೂಲದ ಯುವತಿ ಮಲನ್ಪುರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಚೇತನ್ ಆಕೆಯನ್ನು ಅಡ್ಮಿಟ್ ಮಾಡುವಾಗ ಸುಳ್ಳು ಹೆಸರು ಹೇಳಿದ್ದ ಎಂಬುದು ತಿಳಿದುಬಂದಿದೆ.
ತಡರಾತ್ರಿ ಆಕೆಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಚೇತನ್ ಪ್ರಕಾರ, ಆಕೆಗೆ ಯಾವುದೋ ವಿಷಕಾರಿ ಕೀಟ ಕಚ್ಚಿದೆ, ನಂತರ ಆಕೆಯ ಸ್ಥಿತಿ ಬಹುಬೇಗ ಹದಗೆಡಲು ಶುರುವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಚೇತನ್ ಆಟೋ ರಿಕ್ಷಾದಲ್ಲಿ ಕೂರಿಸಿ ಮುರಾರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು.ಯುವತಿ ಸ್ಥಿತಿ ಗಂಭೀರವಾಗಿತ್ತು ಆತ ಭಯಗೊಂಡು ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಆಕೆ ಪ್ರಜ್ಞಾಹೀನಳಾಗಿರುವುದನ್ನು ಆಸ್ಪತ್ರೆಯ ಸಿಬ್ಬಂದಿ ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಿಕಿತ್ಸೆ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾರೆ.
ಮಾಹಿತಿ ಪಡೆದ ಮುರಾರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ಅದರಲ್ಲಿ ಆರೋಪಿ ಯುವಕ ಕಾಣಿಸಿಕೊಂಡಿದ್ದಾನೆ. ಯುವಕನ ಗುರುತು ಪತ್ತೆಯಾಗದಿದ್ದಾಗ, ಪೊಲೀಸರು ಆಟೋ ಸಂಖ್ಯೆಯ ಮೂಲಕ ಆಟೋ ಚಾಲಕನನ್ನು ಹಿಡಿದು ನಂತರ ಆರೋಪಿ ಯುವಕನ ಮನೆಗೆ ತಲುಪಿದ್ದರು.
ಅಲ್ಲಿ ಪೊಲೀಸರು ಚೇತನ್ ಕುಕ್ರೇಜಾನನ್ನು ಬಂಧಿಸಿದರು. ಪೊಲೀಸರ ಪ್ರಕಾರ, ಚೇತನ್ ನನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.