ಬಿಲ್ಲವರ ಅಸೋಸಿಯೇಶನ್ ಕಲ್ಯಾಣ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

0
232

ಮುಂಬೈ : ಬಿಲ್ಲವರ ಅಸೋಸಿಯೇಶನ್ ಕಲ್ಯಾಣ್ ಸ್ಥಳೀಯ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಭಕ್ತಿ ವಿಜೃಂಭಣೆಯಿಂದ ಆಚರಣೆ ಮುಂಬಯಿ ಬಿಲ್ಲವರ ಅಸೋಸಿಯೇಶನ್ – ಕಲ್ಯಾಣ್ ಸ್ಥಳೀಯ ಕಛೇರಿ ವತಿಯಿಂದ ಸೆಪ್ಟೆಂಬರ್ 07ರಂದು ಕಲ್ಯಾಣ್ ಪಶ್ಚಿಮದಲ್ಲಿರುವ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಸ್ಥಳೀಯ ಕಛೇರಿಯ ಕಾರ್ಯಾಧ್ಯಕ್ಷರಾದ ನಂದೀಶ್ ಜೆ. ಪೂಜಾರಿ ಅವರ ಅಧ್ಯಕ್ಷತೆ ಲಭಿಸಿತು. ಸಮಿತಿಯ ಅರ್ಚಕರಾದ ಭಾಸ್ಕರ್ ಎನ್. ಪೂಜಾರಿ ಅವರ ನೇತೃತ್ವದಲ್ಲಿ ನಾರಾಯಣ ಗುರು ಜಯಂತಿಯ ಪೂಜೆ ಶ್ರದ್ಧಾ–ಭಕ್ತಿಯಿಂದ ನೆರವೇರಿತು. ಗೌರವ ಕಾರ್ಯಾಧ್ಯಕ್ಷರಾದ ಸುರೇಶ್ ಸಿ. ಪೂಜಾರಿ ದಂಪತಿಗಳು ಪೂಜಾ ವೃತವನ್ನು ಕೈಗೊಂಡರು. ಸಮಿತಿ ಸದಸ್ಯರಿಂದ ಭಜನೆ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ತರುಣ ತರುಣಿಯರಿಂದ ಕುಣಿತ ಭಜನೆಗಳೊಂದಿಗೆ ಭಕ್ತಿ ಸಂಭ್ರಮವು ಮೂಡಿಬಂದಿತು. ವೇದಿಕೆಯ ಮೇಲೆ ಅತಿಥಿ ಗಣ್ಯರಾಗಿ ತುಳುನಾಡ ತುಳುವೆರ್ ಕಲ್ಯಾಣ್ ಸಂಸ್ಥೆಯ ಸಂಚಾಲಕರಾದ ಅಶೋಕ್ ಎಲ್. ಪೂಜಾರಿ, ಸಮಾಜಸೇವಕಿ ಗೀತಾ ಸಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೇಂದ್ರ ಕಛೇರಿಯ ಉಪಾಧ್ಯಕ್ಷ ಕೆ. ಸುರೇಶ್ ಕುಮಾರ್ ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಕಲ್ಯಾಣ್ ಸ್ಥಳೀಯ ಕಛೇರಿಯ ಸಂಯೋಜಕರಾದ ಶರತ್ ಜಿ. ಪೂಜಾರಿ, ಕನ್ನಡ ಭವನ ಎಜುಕೇಶನ್ ಸೊಸೈಟಿಯ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸುರೇಶ್ ಎಸ್. ಸುವರ್ಣ, ಹೋಟೆಲ್ ಉದ್ಯಮಿ ದೇವರಾಜ್ ಪೂಜಾರಿ, ಸ್ಥಳೀಯ ಸಮಿತಿಯ ಮಾಜಿ ಗೌ. ಕಾರ್ಯಾಧ್ಯಕ್ಷ ವಿಠ್ಠಲ್ ಕೆ. ಕೋಟಿಯನ್ ಹಾಗೂ ಗೌರವಾಧ್ಯಕ್ಷ ಸುರೇಶ್ ಸಿ. ಪೂಜಾರಿ, ಕಾರ್ಯಾಧ್ಯಕ್ಷ ನಂದೀಶ್ ಜೆ. ಪೂಜಾರಿ, ಕೋಶಾಧಿಕಾರಿ ಸುನಿಲ್ ಕೆ. ಪೂಜಾರಿ, ಯುವ ವಿಭಾಗದ ಪ್ರತಿನಿಧಿ ಪ್ರಶಾಂತ್ ಸಿ. ಪೂಜಾರಿ, ಅಶೋಕ್ ಎಲ್. ಪೂಜಾರಿ ಉಲ್ಯಗುತ್ತು ಪಂಜ ಕೊಯಿಕುಡೆ , ಮಹಿಳಾ ವಿಭಾಗದ ಪ್ರತಿನಿಧಿ ಶಶಿಕಲಾ ಜೆ. ಪೂಜಾರಿ ಉಪಸ್ಥಿತರಿದ್ದರು. ಕು. ದಿಶಾ ಆರ್. ಕೋಟಿಯನ್ ಅವರ ಗುರು ಸ್ತುತಿ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡು, ವೇದಿಕೆಯ ಗಣ್ಯರು ದೀಪಪ್ರಜ್ವಲನೆ ನೆರವೇರಿಸಿದರು. ಅನಿತಾ ಅಮೀನ್ ಅವರು ನಾರಾಯಣ ಗುರುಗಳ ತತ್ವ ಮತ್ತು ಪವಿತ್ರ ಚರಿತ್ರೆಯನ್ನು ಸವಿಸ್ತಾರವಾಗಿ ವಿವರಿಸಿದರು.

ಎಸ್‌.ಎಸ್‌.ಸಿ, ಎಚ್‌.ಎಸ್‌.ಸಿ ಮತ್ತು ಪದವೀಧರ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸ್ಕೂಲ್ ಬ್ಯಾಗ್‌ಗಳನ್ನು ಹಂಚುವ ಮೂಲಕ ಸಂತೋಷ ಹಂಚಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರವಿ ಎಸ್. ಸನಿಲ್ ಮತ್ತು ಸುರೇಶ್ ಕುಮಾರ್ ಪೂಜಾರಿ ಅವರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ 93 ವರ್ಷಗಳಿಂದ ಸಾಧಿಸಿರುವ ಶ್ರೇಷ್ಠ ಅಭಿವೃದ್ಧಿ, ಹಾದುಹೋಗಿದ ಕಾರ್ಯಕಾರಿ ಸಮಿತಿಗಳ ಪರಿಶ್ರಮ ಹಾಗೂ ಇಂದಿನ ಅಧ್ಯಕ್ಷ ಹರೀಶ್ ಜಿ. ಅಮೀನ್ ನೇತೃತ್ವದ ಸಮಿತಿಯ ದೃಷ್ಟಿ ಯೋಜನೆಗಳನ್ನು ಉಲ್ಲೇಖಿಸಿದರು. ಶೀಘ್ರದಲ್ಲೇ ವಿದ್ಯಾಸಂಸ್ಥೆಯ ಕನಸು ನನಸಾಗಲು ಸಮಾಜದ ಎಲ್ಲ ಬಾಂಧವರು ಸಹಕಾರ ನೀಡಬೇಕೆಂದು ಅವರು ಕೋರಿದರು. ಸುರೇಶ್ ಎಸ್. ಸುವರ್ಣ ಅವರು ಮಾನವನು ವಿದ್ಯಾವಂತರಾಗಿ, ಸಂಘಟಿತರಾಗಿ ಬದುಕಿದರೆ ಸಮಾಜವನ್ನು ಅಭಿವೃದ್ಧಿಪಡಿಸಬಹುದು ಎಂದು ಸಂದೇಶ ನೀಡಿದರು. ಮುಖ್ಯ ಅತಿಥಿ ಅಶೋಕ್ ಎಲ್. ಪೂಜಾರಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅನುಸರಿಸಿ ವಿದ್ಯೆಯನ್ನು ಕಲೆದುಕೊಂಡು, ಸಂಘಟನೆಗಳನ್ನು ಬಲಪಡಿಸಿ, ಒಗ್ಗಟ್ಟಿನಿಂದ ಬದುಕಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಬೇಕೆಂದು ಕೋರಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಕಲ್ಯಾಣ್ ಸ್ಥಳೀಯ ಕಛೇರಿಯ ಕಾರ್ಯಕಾರಿ ಸಮಿತಿಗಳು ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಂದೀಶ್ ಜೆ. ಪೂಜಾರಿ ಅವರು ಗುರುಗಳ ಸಂದೇಶದಂತೆ ಎಲ್ಲರೂ ಒಗ್ಗಟ್ಟಿನಿಂದ, ಸಾಮರಸ್ಯದಿಂದ ಬದುಕಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕೋರಿದರು. ಸ್ಥಳೀಯ ಕಛೇರಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಸಮಾಜಬಾಂಧವರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಗುರು ಜಯಂತಿಯ ಪೂಜೆಯಲ್ಲಿ ಕೇಂದ್ರ ಕಛೇರಿಯ ಶಂಕರ್ ಡಿ. ಪೂಜಾರಿ, ಡೊಂಬಿವಲಿ ಮತ್ತು ಕಲ್ವಾ ಸ್ಥಳೀಯ ಕಛೇರಿಯ ಕಾರ್ಯಾಧ್ಯಕ್ಷರು, ಉಪ ಕಾರ್ಯಾಧ್ಯಕ್ಷರು ಹಾಗೂ ಸಮಿತಿ ಸದಸ್ಯರು, ಕಲ್ಯಾಣ್ ಪರಿಸರದ ವಿವಿಧ ಮಂದಿರ ಹಾಗೂ ಸಂಘ ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯ ಕಛೇರಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಶ್ರಮಿಸಿದರು. ಉಪ ಕಾರ್ಯಾಧ್ಯಕ್ಷ ಭೋಜ ಎಸ್. ಪೂಜಾರಿ ಮತ್ತು ಸದಸ್ಯೆ ಭಾರತಿ ಆರ್. ಪೂಜಾರಿ ನಿರೂಪಣೆ ಹಾಗೂ ಧನ್ಯವಾದಾರ್ಪಣೆ ನೆರವೇರಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಸ್ಥಳೀಯ ಕಛೇರಿಯ ಗೌ. ಕಾರ್ಯಾಧ್ಯಕ್ಷ ಮತ್ತು ಹೋಟೆಲ್ ಉದ್ಯಮಿ ಸುರೇಶ್ ಸಿ. ಪೂಜಾರಿ – ಬದ್ಲಾಪುರ ಪರಿವಾರದವರ ವತಿಯಿಂದ ಅನ್ನಸಂತರ್ಪಣೆ ಜರುಗಿತು.

LEAVE A REPLY

Please enter your comment!
Please enter your name here