ಕ್ರೂರ ಹತ್ಯೆ ಬಯಲು : ಶವವನ್ನು ನಿರ್ಜನ ಪ್ರದೇಶಕ್ಕೆ ತಂದು ಬಿಸಾಕುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಆರೋಪಿ

0
22

ಆನೇಕಲ್ : ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಬಾವನೇ ಬಾಮೈದನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಆರೋಪಿಯನ್ನು ಬನ್ನೇರುಘಟ್ಟ ಮೂಲದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆನೇಕಲ್ ತಾಲೂಕಿನ ಮರಸೂರು ಮೂಲದ ರಂಜಿತ್ ಕೊಲೆಯಾದ ವ್ಯಕ್ತಿ. ರಂಜಿತ್ ಸಹೋದರಿಯನ್ನು ಶ್ರೀನಿವಾಸ್ ವಿವಾಹವಾಗಿದ್ದ. ಆದರೆ, ಶ್ರೀನಿವಾಸ್ ತಂಗಿಯ ಜೊತೆ ರಂಜಿತ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಕುಟುಂಬಗಳ ನಡುವೆ ಗಲಾಟೆಯಾಗಿತ್ತು.

ಶ್ರೀನಿವಾಸ್ ಸಹೋದರಿಯನ್ನು ಬೇರೊಬ್ಬರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೂ ರಂಜಿತ್ ಜೊತೆಗೆ ಆಕೆ ಅಕ್ರಮ ಸಂಬಂಧ ಮುಂದುವರೆಸಿದ್ದಳು. ಇತ್ತೀಚೆಗೆ ತನ್ನ ಗಂಡನನ್ನು ಬಿಟ್ಟಿದ್ದ ಶ್ರೀನಿವಾಸ್ ತಂಗಿ, ರಂಜಿತ್ ಜೊತೆ ಓಡಿ ಹೋಗಿದ್ದಳು. ಈ ವಿಚಾರ ಎರಡು ಕುಟುಂಬಗಳ ನಡುವೆ ಕಲಹಕ್ಕೆ ಕಾರಣವಾಗಿತ್ತು. ತನ್ನ ತಂಗಿಯ ಸಂಸಾರ ಹಾಳಾಗಲು ರಂಜಿತ್ ಕಾರಣ ಎಂದು ಶ್ರೀನಿವಾಸ್ ಆಕ್ರೋಶಗೊಂಡಿದ್ದ. ತಂಗಿಯ ವಿಚಾರವಾಗಿ ಬುದ್ಧಿ ಹೇಳಲು ರಂಜಿತ್‌ನನ್ನು ಕರೆಸಿಕೊಂಡಿದ್ದ ಶ್ರೀನಿವಾಸ್, ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಕೃತ್ಯದ ಬಳಿಕ ರಂಜಿತ್ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಬನ್ನೇರುಘಟ್ಟದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ತಂದಿದ್ದಾನೆ. ಬಿಲ್ವಾರದಹಳ್ಳಿಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೊಬ್ಬ ಹೆಣ ಬಿಸಾಡುತ್ತಿರುವ ಬಗ್ಗೆ ಬನ್ನೇರುಘಟ್ಟ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದಾಗ, ಶ್ರೀನಿವಾಸ್ ಮೃತದೇಹವನ್ನು ಬಿಸಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿ, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here