ಬ್ರಹ್ಮಾವರ, ಮಾರ್ಚ್ 2 : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಟಿವಿ ಟೆಕ್ನಿಷಿಯನ್ ಹಾಗೂ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ರಾಬರ್ಟ್ ರೋಡ್ರಿಗಸ್, ಪ್ರಾಂಶುಪಾಲರು, ಎಸ್ ಎಂ ಎಸ್ ಕಾಲೇಜ್ ಬ್ರಹ್ಮಾವರ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತ್ವರಿತ ಯಶಸ್ಸಿನತ್ತ ಹೆಚ್ಚು ಆತುರಪಡಬಾರದು ಎಂದು ಸಲಹೆ ನೀಡಿದರು. ಕೊರೋನಾ ಸಂದರ್ಭದಲ್ಲಿ ಸಹಬಾಳ್ವೆ ಹಾಗೂ ಜೀವನ ಮೌಲ್ಯಗಳ ಮಹತ್ವವನ್ನು ನಾವು ಕಲಿತಿದ್ದೇವೆ. ಎಷ್ಟೇ ಸಾಧನೆ ಮಾಡಿದರೂ ವ್ಯಕ್ತಿತ್ವವೇ ನಮ್ಮನ್ನು ಗುರುತಿಸುವುದಾಗಿ, ಆದ್ದರಿಂದ ಹಣಕ್ಕಿಂತ ವ್ಯಕ್ತಿತ್ವ, ಶಿಸ್ತು, ಪ್ರಾಮಾಣಿಕತೆ ಮತ್ತು ದೃಢಸಂಕಲ್ಪ ಮುಖ್ಯವೆಂದು ಹೇಳಿದರು.

“ಆರೋಗ್ಯಕರ ಬದಲಾವಣೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆ ಉತ್ತಮ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ,” ಎಂದು ಕರೆ ನೀಡಿದ ಅವರು ಕೃಷಿ ಹಾಗೂ ಟಿವಿ ಟೆಕ್ನಿಷಿಯನ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲಕ್ಕಪ್ಪ, ಎ.ಎಸ್.ಐ ಬ್ರಹ್ಮಾವರ ಮಾತನಾಡಿ, ಕೃಷಿಯ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರಾರ್ಥಿಗಳನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಿದೆ ಎಂದರು. ಸಮಯ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿ, ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗುವಂತೆ ಶುಭಾಶಯ ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬೊಮ್ಮಯ್ಯ ಎಂ ಅವರು ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಶಿಬಿರಾರ್ಥಿಗಳು ತರಬೇತಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿರುವುದಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನಂದನ್, ಪ್ರತ್ಯಕ್ಷ ಶೆಟ್ಟಿ ಹಾಗೂ ಜೋಸೆಫ್, ಸುನಂದಾ ಲಮಣಿ, ಪ್ರಶಾಂತ್ ಶಿಬಿರಾರ್ಥಿಗಳು ತರಬೇತಿಯ ಅನುಭವವನ್ನು ಹಂಚಿಕೊಂಡರು. ಈ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಟೂಲ್ ಕಿಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಉಪನ್ಯಾಸಕಿ , ಚೈತ್ರ ಕೆ ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಸಂತೋಷ್ ವಂದಿಸಿದರು.

