ವರದಿ ರಾಯಿ ರಾಜ ಕುಮಾರ
ಕೆಪಿಎಸ್ ಶಾಲೆಯಾಗಿ ಉನ್ನತೀಕರಣ : ಸುಮಾರು 115 ವರ್ಷಗಳ ಇತಿಹಾಸ ಇರುವ ಮಿಜಾರು ಪ್ರಾಥಮಿಕ ಶಾಲೆ 2019 ರಲ್ಲಿ ಕೆಪಿಎಸ್ ಶಾಲೆಯಾಗಿ ಮೆಲ್ದರ್ಜೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ಕೆಪಿಎಸ್ ಶಾಲೆಯಾಗಿ ಪರಿವರ್ತನೆಯಾಗಲು ಮುಖ್ಯವಾಗಿ ಕಾರಣ ಒಂದೇ ಶಾಲಾ ಪರಿಸರದಲ್ಲಿ ಬಾಲವಾಡಿಯಿಂದ ಪಿಯು ಅಥವಾ ಎಲ್ಕೆಜಿಯಿಂದ ಪಿಯು ತನಕ ಮಗುವಿನ ಅಧ್ಯಯನಕ್ಕೆ ಅವಕಾಶ ದೊರಕಬೇಕು. ಅಂತಹ ಅವಕಾಶ ಮಿಜಾರು ಶಾಲೆಯಲ್ಲಿ ಇದ್ದ ಕಾರಣ ಇದೀಗ ಸಮಗ್ರ ಶಿಕ್ಷಣ ಇಲಾಖೆಯಿಂದ ಒಪ್ಪಿತವಾದಂತೆ ಒಂದೇ ಕ್ಯಾಂಪಸ್ ನ ಒಳಗೆ ಆ ಎಲ್ಲಾ ತರಗತಿಗಳು ಬರುವಂತೆ ಮಾಡಲಾಗುತ್ತಿದೆ.
ಒಂದೇ ಕ್ಯಾಂಪಸ್ ನ ಒಳಗೆ ಎಲ್ಲವೂ :- ಡಿಸೆಂಬರ 31 ರಂದು ಶಾಸಕರ ಸಮಕ್ಷಮ ನಡೆದ ಶಾಲಾ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಸಮಗ್ರ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಾಲೆಯ ಆಟದ ಮೈದಾನದ ಸಮಗ್ರತೆಯನ್ನು ಇದ್ದಂತೆಯೇ ಉಳಿಸಿಕೊಂಡು ಈಗಾಗಲೇ ಸಮತಟ್ಟುಗೊಳಿಸಿದ ಪ್ರದೇಶದಲ್ಲಿ ಮೂರು ಹಂತಗಳ ಸುಂದರ ಕಟ್ಟಡ ರಚನೆಯ ರೂಪರೇಷೆಯನ್ನು ಸಭೆಯಲ್ಲಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಶಿಕ್ಷಣಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳ ಎದುರು ಪ್ರಸ್ತುತಪಡಿಸಿ ಒಪ್ಪಿಗೆಯನ್ನು ಪಡೆಯಲಾಗಿರುತ್ತದೆ ಎನ್ನುವುದು ಶಾಲಾ ಮುಖ್ಯಸ್ಥರನ್ನು ಸಂಧಿಸಿದಾಗ ತಿಳಿದು ಬಂದಿದೆ.
ಪ್ರಸ್ತುತ ಅತಿ ಅಗತ್ಯದ ನಾಲ್ಕು ರೂಮುಗಳನ್ನು ಕಟ್ಟಲು ಒಂದು ಕೋಟಿ ಅನುದಾನ ಬಂದಿದ್ದು ಅದನ್ನು ಆದಷ್ಟು ಶೀಘ್ರ ಜಾರಿಗೊಳಿಸಲಾಗುತ್ತಿದೆ. ಹಂತ ಹಂತವಾಗಿ 16 ರೂಮುಗಳು ಮುಂದೆ ರಚನೆಯಾಗಲಿವೆ. ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ, ಬಂಟ್ವಾಳದ ಕನ್ಯಾನ, ಸುಳ್ಯದ ಬೆಳ್ಳಾರೆ, ಪುತ್ತೂರು ಇತ್ಯಾದಿ ತಾಲೂಕುಗಳಲ್ಲಿ ಈಗಾಗಲೇ ಕೆಪಿಎಸ್ ಸಮಗ್ರ ಶಿಕ್ಷಣ ಇಲಾಖೆಯ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಒಂದೇ ಕ್ಯಾಂಪಸ್ ನಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿವೆ. ಅಂತಹದ್ದೇ ಉತ್ತಮ ರೀತಿಯ ಸುಂದರವಾದ ರಚನೆ ಮೂಡುಬಿದಿರೆ ತಾಲೂಕಿನ ಮಿಜಾರು ಪ್ರದೇಶದಲ್ಲಿ ರಚನೆಯಾಗಬೇಕೆಂದು ನಮ್ಮ ಆಸೆ ಎಂದು ಶಾಲಾ ಮುಖ್ಯಸ್ಥರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕೆಪಿಎಸ್ ಶಾಲೆಗಾಗಿ 2 ಎಕರೆ 95 ಸೆಂಟ್ಸ್ ಪ್ರದೇಶ ಈಗಾಗಲೇ ಇದೆ. ಒಂದೇ ಕ್ಯಾಂಪಸ್ ನಲ್ಲಿ ರಚನೆಗಳನ್ನು ಮಾಡುವುದಕ್ಕೆ 9-11 ನ ಅಗತ್ಯ ಇರುವುದಿಲ್ಲ. ಅಲ್ಲದೆ ಕಟ್ಟಡ ರಚನೆಯಿಂದ ವಿದ್ಯಾರ್ಥಿಗಳ ಆಟದ ಮೈದಾನದ ಸಮಗ್ರ ರೂಪಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಈಗಾಗಲೇ ತಾಂತ್ರಿಕ ತಜ್ಞರುಗಳು ಶಾಸಕರಿಗೆ ತಿಳಿಸಿರುತ್ತಾರೆ.ಒಟ್ಟಾರೆ 682 ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್ ನಲ್ಲಿ ಸುಂದರವಾದ ಕಟ್ಟಡದ ರಚನೆಯ ಅಡಿಯಲ್ಲಿ ವಿದ್ಯಾರ್ಜನೆ ಮಕ್ಕಳಿಗೆ ದೊರಕಿದರೆ ಉತ್ತಮ ಎನ್ನುವುದು ಸಾರ್ವಜನಿಕರ ಅಭಿಪ್ರಾಯವೂ ಕೂಡ.

ಮಕ್ಕಳ ಸುರಕ್ಷತೆ :- ರಸ್ತೆಯ ಒಂದು ಮಗ್ಗುಲಲ್ಲಿ ಪ್ರೌಢಶಾಲೆ ಹಾಗೂ ಪಿಯು ತರಗತಿಗಳು ನಡೆಯುತ್ತಿದ್ದು, ರಸ್ತೆಯ ಇನ್ನೊಂದು ಮಗ್ಗುಲಲ್ಲಿರುವ ಪ್ರಾಥಮಿಕ ಶಾಲೆಯಿಂದಾಗಿ ವಿದ್ಯಾರ್ಥಿಗಳ ಚಲನವಲನಕ್ಕೆ ಬಹಳ ತೊಂದರೆದಾಯಕವಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೂಡ ಒಂದೇ ಕ್ಯಾಂಪಸ್ ನ ಅಗತ್ಯ ಬಹಳಷ್ಟು ಇದೆ.
ತಾಲೂಕು ಹಾಸ್ಟೆಲ್ ಆಗಿ ಪರಿವರ್ತನೆ :- ಒಂದು ವೇಳೆ ಸಂಪೂರ್ಣವಾಗಿ ಉದ್ದೇಶಿತ ಕಟ್ಟಡದ ಪ್ರದೇಶಕ್ಕೆ ಪ್ರಾಥಮಿಕ ಶಾಲೆ ವರ್ಗಾವಣೆಗೊಂಡಲ್ಲಿ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪರಿಶಿಷ್ಟರ ವಸತಿಗಾಗಿ ಉಪಯೋಗಿಸಬಹುದಾದ ಸಾಧ್ಯತೆ ಇರುತ್ತದೆ. ಏಕೆಂದರೆ ಮೂಡುಬಿದರೆಯ ಕಲ್ಲಬೆಟ್ಟು ಹಾಗೂ ಬೇಟ್ಗೇರಿ ಪ್ರದೇಶದಲ್ಲಿ ಬಾಡಿಗೆಯಲ್ಲಿ ಕಾರ್ಯಾಚರಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳನ್ನು ಮಿಜಾರಿಗೆ ವರ್ಗಾಯಿಸಿದರೆ ಸರಕಾರಕ್ಕೆ ಸಾಕಷ್ಟು ಉಳಿತಾಯವು ಕೂಡ ಇದೆ ಎನ್ನುವುದನ್ನು ಶಾಲಾ ಮುಖ್ಯಸ್ಥರು ಈಗಾಗಲೇ ಶಾಸಕರ ಗಮ ನಕ್ಕೆ ತಂದಿರುತ್ತಾರೆ.
ಶಾಲಾ ಆಟದ ಮೈದಾನ ಶಾಲೆಗಾಗಿ ಮಾತ್ರ :- ಶಿಕ್ಷಣ ಇಲಾಖೆ ಹಾಗೂ ಸರಕಾರ ಈಗಾಗಲೇ ಸೂಚಿಸಿರುವಂತೆ ಶಾಲಾ ಆಟದ ಮೈದಾನವನ್ನು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕೆ ಹೊರತಾಗಿ ಯಾವುದೇ ಇತರ ಉದ್ದೇಶಗಳಿಗೆ ಬಳಕೆಯಾಗಬಾರದು. ಶಾಲೆಯ ಹಾಗೂ ವಿದ್ಯಾರ್ಥಿಗಳ ಬಳಕೆಗೆ ಬಿಟ್ಟು ಬೇರೆ ಯಾರಿಗೂ ಅಲ್ಲಿ ಪ್ರವೇಶಿಸುವ ಅಧಿಕಾರ ಇಲ್ಲ ಎಂದು ನಿರ್ದೇಶನ ನೀಡಿರುತ್ತದೆ. ಆ ನಿರ್ದೇಶನದ ಪ್ರಕಾರ ಯಾವುದೇ ಶಾಲೆಯ ಯಾವುದೇ ಆಟದ ಮೈದಾನವಾಗಲಿ, ಕಟ್ಟಡವನ್ನಾಗಲಿ ಸಾಲ್ವಿಜನಿಕ ಹಿತಾಸಕ್ತಿಗೆ, ಬಳಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ನಿರ್ದೇಶಿಸಿರುತ್ತದೆ. ಇದಕ್ಕೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಕೂಡ ಒಪ್ಪಿಕೊಂಡಿರುತ್ತವೆ. ಹೀಗಾಗಿ ಎಲ್ಲರೂ ಒಪ್ಪಿತಗೊಂಡಿರುವ ಪ್ರದೇಶದಲ್ಲಿಯೇ ಕಟ್ಟಡ ರಚನೆಯಾಗಿ ಮೂಡುಬಿದಿರೆ ತಾಲೂಕಿಗೆ ಸುಂದರವಾದ ಕೆಪಿಎಸ್ ಶಾಲೆ ನಿರ್ಮಾಣವಾಗಲಿ.

