ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ ರಚನೆ: ಸಚಿವ ಸಂಪುಟ ನಿರ್ಧಾರ

0
75

ಬೆಂಗಳೂರು: ಗಣಿ ಅಕ್ರಮ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸರ್ಕಾರಕ್ಕಾಗಿರುವ ನಷ್ಟ ವಸೂಲಿಗೆ ವಸೂಲಿ ಆಯುಕ್ತರ ನೇಮಕ ಹಾಗೂ ಪ್ರಕರಣಗಳ ವಿಚಾರಣೆ ನಡೆಸಿ, ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಸಚಿವ ಎಚ್‌.ಕೆ. ಪಾಟೀಲ್‌ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಲ್ಲಿಸಿದ್ದ ವರದಿಗೆ ಅನುಮೋದನೆ ನೀಡಲಾಗಿದೆ.

ವರದಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ನಷ್ಟವನ್ನು ವಸೂಲಿ ಮಾಡಲು ರಾಜ್ಯವ್ಯಾಪ್ತಿ ಒಂದೇ ವಸೂಲಿ ಪ್ರಾಧಿಕಾರ (ಆಯುಕ್ತರ)ವನ್ನು ನೇಮಿಸಬೇಕು. ಅದಕ್ಕಾಗಿ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ತಿಳಿಸಲಾಗಿತ್ತು. ಅದಕ್ಕೆ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದ್ದು, ವಸೂಲಿ ಪ್ರಾಧಿಕಾರ ರಚನೆಗೆ ಹೊಸದಾಗಿ ಕಾನೂನು ಜಾರಿಗೊಳಿಸಬೇಕಿದ್ದು, ಅದಕ್ಕೆ ಸಂಬಂಧಿಸಿದಂತೆ ಇದೇ ಅಧಿವೇಶನದಲ್ಲಿ ಹೊಸ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅದರ ಜತೆಗೆ ಸಮಿತಿಯ ವರದಿಯಲ್ಲಿ, ಸರ್ಕಾರಕ್ಕಾಗಿರುವ ಆರ್ಥಿಕ ನಷ್ಟವನ್ನು ತ್ವರಿತಗತಿಯಲ್ಲಿ ವಸೂಲಿ ಮಾಡಲು ಅನುಕೂಲವಾಗುವಂತೆ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ವಿಚಾರಣೆ ನಡೆಸಲು ಗಣಿ ಪ್ರಕರಣಗಳಿಗೆ ಸೀಮಿತವಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ತಿಳಿಸಲಾಗಿತ್ತು. ಅದಕ್ಕೂ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ಅದರ ರೂಪುರೇಷೆ ಸಿದ್ಧಪಡಿಸಲು ಸಚಿವ ಸಂಪುಟ ಉಪಸಮಿತಿಗೆ ತಿಳಿಸಲಾಗಿದೆ. ಅದರ ಜತೆಗೆ ಪ್ರಕರಣಗಳ ತನಿಖೆ ಕುರಿತು ಮೇಲ್ವಿಚಾರಣೆಗೆ ಮೇಲುಸ್ತುವಾರಿ ಸಮಿತಿ ರಚನೆಯ ಶಿಫಾರಸಿಗೂ ಒಪ್ಪಿಗೆ ನೀಡಲಾಗಿದೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ 1.50 ಲಕ್ಷ ಕೋಟಿ ರು.ಗಳಷ್ಟು ನಷ್ಟವುಂಟಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಕೇವಲ ಶೇ. 7.6ರಷ್ಟು ಮಾತ್ರ ತನಿಖೆ ನಡೆಸಲಾಗಿದೆ. ಅಪರಾಧಿಗಳನ್ನು ಶಿಕ್ಷಿಸಲು ಮತ್ತು ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ಎಚ್.ಕೆ. ಪಾಟೀಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದರ ಆಧಾರದಲ್ಲಿ ಸರ್ಕಾರ ಎಚ್.ಕೆ. ಪಾಟೀಲ್‌ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವರದಿ ನೀಡಲು ಸೂಚಿಸಿತ್ತು.

ಕುರಿಗಾಹಿ ನಿಂದಿಸಿದರೆ 5 ವರ್ಷ ಜೈಲು ಶಿಕ್ಷೆ: ರಾಜ್ಯದ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಹಿತರಕ್ಷಣೆಗಾಗಿ ಅವರಿಗೆ ಭದ್ರತೆ ಒದಗಿಸುವ ಹಾಗೂ ಅವರ ಮೇಲೆ ನಿಂದನೆ, ಅಪಮಾನ ಮಾಡಿದರೆ ಶಿಕ್ಷೆ ವಿಧಿಸುವ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ 2025ರ ಅಡಿ ಅರಣ್ಯ ಭೂಮಿ (ಮೀಸಲು ಅರಣ್ಯ ಪ್ರದೇಶ ಹೊರತುಪಡಿಸಿ), ಸರ್ಕಾರಿ ಜಮೀನಿಗೆ ಪ್ರವೇಶ ನಿರಾಕರಿಸಿದರೆ ಅಂಥ ವ್ಯಕ್ತಿಗೆ ಒಂದು ವರ್ಷವರೆಗಿನ ಸೆರೆಮನೆ ಶಿಕ್ಷೆ ಹಾಗೂ 50 ಸಾವಿರ ರು.ವರೆಗಿನ ದಂಡ, ಕುರಿಗಾಹಿಗಳನ್ನು ಸಾರ್ವಜನಿಕರು ಬಳಸುವ ಸಾರ್ವಜನಿಕ ಸ್ಥಳಗಳಿಗೆ ಹೋಗಲು ಅಥವಾ ಮೇಯಿಸುವ ಸಾಂಪ್ರದಾಯಿಕ ಹಕ್ಕನ್ನು ನಿರಾಕರಿಸಿದ ವ್ಯಕ್ತಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ವರೆಗಿನ ದಂಡ ವಿಧಿಸುವುದು. ಜತೆಗೆ ಉದ್ದೇಶಪೂರ್ವಕವಾಗಿ ಯಾವುದೇ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳನ್ನು ನಿಂದಿಸಿದರೆ, ಅಪಮಾನಿಸಿದವರಿಗೆ 6 ತಿಂಗಳಿಂದ 5 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ಸೇರಿದಂತೆ ವಿವಿಧ ಅಂಶಗಳನ್ನು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗುತ್ತದೆ.

ಕಾಲ್ತುಳಿತ ತಡೆಗೆ ಹೊಸ ಕಾಯ್ದೆ: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದ ನಂತರ ಅದೇ ರೀತಿಯ ದುರಂತ ಸಂಭವಿಸುವುದನ್ನು ತಡೆಯಲು ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕ ಕಾಯ್ದೆ ತರಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ ಯಾವುದೇ ಬೃಹತ್ ಕಾರ್ಯಕ್ರಮ ಆಯೋಜನೆಗೂ ಮುನ್ನ ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳು, ಅನುಮತಿಗಳು ಸೇರಿದಂತೆ ಮತ್ತಿತರ ಅಂಶಗಳು ಕಾಯ್ದೆಯಲ್ಲಿರಲಿವೆ. ಅದರ ಜತೆಗೆ ಕಾಯ್ದೆ ಉಲ್ಲಂಘಿಸಿದರೆ ವಿಧಿಸಬಹುದಾದ ಶಿಕ್ಷೆಗಳ ವಿವರವನ್ನೂ ಕಾಯ್ದೆಯಲ್ಲಿ ಸೇರಿಸಲಾಗುತ್ತಿದೆ. ಹಾಗೆಯೇ, ನ್ಯಾ. ಮೈಕಲ್‌ ಡಿ.ಕುನ್ಹಾ ಆಯೋಗವು ನೀಡಿದ್ದ ಶಿಫಾರಸುಗಳನ್ನೂ ನೂತನ ಕಾಯ್ದೆಯಲ್ಲಿ ಸೇರಿಸಲಾಗುತ್ತದೆ.

ವಸತಿ ಸಮುಚ್ಛಯಗಳಲ್ಲಿ ಲಿಫ್ಟ್‌ ಅಳವಡಿಕೆಗೆ ಅನುಮತಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಹಾಲಿ ಇರುವ ಕರ್ನಾಟಕ ಲಿಫ್ಟ್‌ಗಳು, ಎಸ್ಕಲೇಟರ್‌ಗಳು ಮತ್ತು ಪ್ರಯಾಣಿಕರ ಸಾಗಣೆದಾರರ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಯಿತು. ಅದರಂತೆ ಹಾಲಿ ವಾಣಿಜ್ಯ ಕಟ್ಟಡಗಳಲ್ಲಿ ಲಿಫ್ಟ್‌ ಅಳವಡಿಕೆಗೆ ಲಿಫ್ಟ್‌ ಆಯುಕ್ತರಿಂದ ಅನುಮತಿ ಪಡೆಯಬೇಕಿದೆ. ವಸತಿ ಕಟ್ಟಡಗಳಲ್ಲಿ ಲಿಫ್ಟ್‌ ಅಳವಡಿಕೆಗೂ ಅವರೇ ಅನುಮತಿಸಬೇಕಿದ್ದು, ಅದರಿಂದ ಅವರ ಮೇಲಿನ ಕೆಲಸದೊತ್ತಡ ಹೆಚ್ಚುತ್ತಿದೆ. ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ವಸತಿ ಕಟ್ಟಡಗಳಲ್ಲಿ ಲಿಫ್ಟ್‌ ಅಳವಡಿಕೆಗೆ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ನೀಡುವ ಅಧಿಕಾರವನ್ನು ಕೊಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

LEAVE A REPLY

Please enter your comment!
Please enter your name here