ತರಬೇತಿ ಮತ್ತು ಕೌಶಲ್ಯ ವರ್ಧನೆ ಭವಿಷ್ಯದ ಹೊಸ ಆಯಾಮ: ರಾಜೇಶ್ ಡಿಕೋಸ್ತ

ಮಂಗಳೂರು : ಕೆಲಸದ ಸ್ಥಳಗಳು ಮತ್ತು ಉದ್ಯಮಗಳು ಬೆಳೆಯುತ್ತಿರುವಂತೆ ಉದ್ಯೋಗಿಗಳ ಸಾಮರ್ಥ್ಯ ಮತ್ತು ಕೌಶಲ್ಯಗಳು ಅಗತ್ಯವಾಗುತ್ತಿವೆ ಎಂದು ಮಂಗಳೂರು ಎಂ.ಆರ್. ಪಿ.ಎಲ್ ನ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ರಾಜೇಶ್ ಡಿಕೋಸ್ತ ಅಭಿಪ್ರಾಯಿಸಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಕೆನರಾ ಬ್ಯಾಂಕ್ ಚೇರ್ ವತಿಯಿಂದ ಆಯೋಜಿಸಲಾದ ಎಮ್. ಕಾಂ. ಎಚ್. ಆರ್. ಡಿ. ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ಮತ್ತು ಕೌಶಲ್ಯ ವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಉದ್ಯೋಗಿಗಳಲ್ಲಿ ಕೌಶಲ್ಯಗಳನ್ನು ಗುರುತಿಸುವುದು. ಅವರಿಗೆ ಬೇಕಾದ ತರಬೇತಿಯನ್ನು ನೀಡುವುದು ಅಗತ್ಯವಾಗಿದೆ. ಮುಖ್ಯವಾಗಿ ಕೌಶಲ್ಯ ಸ್ಪರ್ಧೆಗಳು ನಡೆಯುತ್ತಿವೆ ಹಾಗಾಗಿ ತಂಡವಾಗಿ ಕೆಲಸ ಮಾಡುವುದು, ಸಮಸ್ಯೆಗಳಿಗೆ ಪರಿಹಾರ ಮತ್ತು ಸಮಯ ನಿರ್ವಹಣೆಯ ಕಲೆಗಳನ್ನು ರೂಪಿಸಿಕೊಳ್ಳಬೇಕು.
ಎಚ್ಆರ್ ಉದ್ಯೋಗಿಗಳು ಪಿ.ಎಫ್. ಮತ್ತು ಸಂಬಳದ ನಿರ್ವಹಣೆಯ ಕುರಿತು ಜ್ಞಾನ ಹಾಗೂ ಮಾಹಿತಿಗಳನ್ನು ಕರಗತ ಮಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಮತ್ತು ಸಂಸ್ಥೆಗಳಲ್ಲಿನ ಟ್ರೇಡ್ ಯೂನಿಯನ್ ಮತ್ತು ಅವು ನಿರ್ವಹಿಸುತ್ತಿರುವ ಉದ್ಯೋಗಿಗಳ ಬಗ್ಗೆ ಕಾಳಜಿ ಇತ್ಯಾದಿ ಅನೇಕ ಮಹತ್ವದ ವಿಷಯಗಳನ್ನು ಭವಿಷ್ಯತ್ತಿನಲ್ಲಿ ಉದ್ಯೋಗಿಗಳಾಗಲಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಕೆನರಾ ಬ್ಯಾಂಕ್ ಚೇರ್ ಸಂಯೋಜಕಿ ಡಾ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಗುರುರಾಜ್ ಪಿ, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಉಪಸ್ಥಿತರಿದ್ದರು.
ಎಮ್. ಕಾಂ. ಎಚ್. ಆರ್. ಡಿ. ಯ ಪ್ರಥಮ ಮತ್ತು ಅಂತಿಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ದಿವ್ಯ ಡಿ. ಕ್ರಾಸ್ತ ಸ್ವಾಗತಿಸಿದರು. ವೀಕ್ಷಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ರಕ್ಷಾ ಎ. ಎಂ. ಧನ್ಯವಾದಗೈದರು. ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು.