ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶತ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ

0
8

ಕಾಣಿಯೂರು: ಶತಮಾನ ಪೂರೈಸಿದ ಚಾರ್ವಾಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಸಲುವಾಗಿ ಹೊರತಂದ ಸ್ಮರಣ ಸಂಚಿಕೆ ‘ ಶತ ಸಂಭ್ರಮ’ದ ಲೋಕಾರ್ಪಣೆ ಕಾರ್ಯಕ್ರಮ ಸಂಘದ ಅಧ್ಯಕ್ಷ ಗಣೇಶ್ ಕೆ. ಎಸ್. ಉದನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಣಿಯೂರಿನ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಜರುಗಿದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಸಂಚಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಸಂಘದ ಸಾಧನೆ ಎಲ್ಲರಿಗೂ ಮಾದರಿ ಎಂದರು. ಚಾರ್ವಾಕ ವಾದ ಎಂದರೆ ಸಾಲಮಾಡಿ ತುಪ್ಪ ತಿನ್ನಬೇಕು ಎಂಬುದಾಗಿದೆ. ಆದರೆ ಚಾರ್ವಾಕ ಊರು ಚಾರ್ವಾಕ ವಾದವನ್ನು ಹೊಂದಿಲ್ಲದ ಸುಂದರವಾದ ಊರಾಗಿದೆ ಎಂದರು.

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಮಾತನಾಡಿ ಕೃಷಿಕ ಕೇಂದ್ರಿತವಾಗಿ ಕಾರ್ಯೋನ್ಮುಖವಾಗಿರುವ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಸಹಕಾರಿ ಸಂಘಗಳ ಉಪ ನೋಂದಣಾಧಿಕಾರಿಗಳಾದ ಎಸ್. ಎನ್. ಪ್ರಭು ಶುಭಹಾರೈಸಿದರು. ಸಂಚಿಕೆಯ ಸಂಪಾದಕದಾರಾದ ಸೀತಾರಾಮ ಕೇವಳ ಮತ್ತು ಸಹ ಸಂಪಾದಕಿ ವಚನಾ ಪ್ರದೀಪ್‌ ಸಂದರ್ಭೋಚಿತವಾಗಿ ಮಾತನಾಡಿದರು.

ಸಂಘದ ಅಧ್ಯಕ್ಷ ಗಣೇಶ್ ಕೆ. ಎಸ್. ಉದನಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ ಅಧ್ಯಕ್ಷತೆಯ ನುಡಿಗಳನ್ನಾಡಿದರು. ಸಂಘದ ವಾರ್ಷಿಕ ಮಹಾಸಭೆ ಚಾರ್ವಾಕ, ದೋಲ್ಪಾಡಿ ಮತ್ತು ಕಾಣಿಯೂರು ಗ್ರಾಮಗಳ 1547 ಮನೆಗಳ ವ್ಯಾಪ್ತಿಯನ್ನು ಹೊಂದಿರುವ ಸಂಘದ ಮಹಾಸಭೆಯಲ್ಲಿ ಪೂರ್ವಾದ್ಯಕ್ಷರು, ಮಾಜಿ ಪದಾಧಿಕಾರಿಗಳು, ಗ್ರಾಮದ ಸಾಧಕರು, ವಿವಿಧ ಸಹಕಾರ ನೀಡಿದವರು ಮತ್ತು ಸಂಚಿಕೆಯ ಸಂಪಾದಕ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್‌ ಅವರು ಧನ್ಯವಾದ ಸಮರ್ಪಿಸಿ ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here