ಮುಂಬೈ: ತುಳುವರ ಹಿತಾಸಕ್ತಿ, ಭಾಷಾ–ಸಂಸ್ಕೃತಿ ಸಂರಕ್ಷಣೆ ಹಾಗೂ ಸಮುದಾಯದ ಒಗ್ಗಟ್ಟಿಗಾಗಿ ಕಾರ್ಯನಿರ್ವಹಿಸುತ್ತಿರುವ ತುಳುವ ಮಹಾಸಭೆ ಮುಂಬೈ ವಿಕ್ರೋಲಿ ಘಟಕದ ಸಂಚಾಲಕರಾಗಿ, ಹೋಟೆಲ್ ಉದ್ಯಮಿ ಮತ್ತು ಸಮಾಜಸೇವಕ ಚಂದ್ರಕೃಷ್ಣ ಶೆಟ್ಟಿ ಬೆರ್ಮೊಟ್ಟು ಅವರನ್ನು ನೇಮಿಸಲಾಗಿದೆ. ಈ ನೇಮಕವನ್ನು ತುಳು ವರ್ಲ್ಡ್ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಘವೇಂದ್ರ ಶೆಟ್ಟಿ ಅತ್ರಾಡಿ ಪ್ರಕಟಿಸಿದ್ದಾರೆ.
ವಿಕ್ರೋಲಿ, ಮುಂಬೈನಲ್ಲಿ ವಾಸವಾಗಿರುವ ಚಂದ್ರಕೃಷ್ಣ ಶೆಟ್ಟಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ: ಹೋಟೆಲ್ ಉದ್ಯಮಿ ಆಗಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಮಾನವ ಹಕ್ಕು – ಮಹಿಳಾ ಹಾಗೂ ಬಾಲವಿಕಾಸ್ ಸಂಘಟನೆ, ಮುಂಬೈ ಜಿಲ್ಲಾ ಉಪಾಧ್ಯಕ್ಷ. ತೌಳವ ಧರ್ಮ ಜನಜಾಗೃತಿ ಸಮಿತಿ ಸದಸ್ಯ. ದೈವಾರಾಧನೆ ಸಂರಕ್ಷಣಾ ವೇದಿಕೆ ಸದಸ್ಯರಾಗಿ ತುಳುನಾಡಿನ ದೈವ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ತುಳುವ ಮಹಾಸಭೆ 1928ರಿಂದಲೇ ತುಳು ನಾಡಿನ ಭಾಷಾ–ಸಂಸ್ಕೃತಿ, ಆಚಾರ–ವಿಚಾರಗಳ ಪುನರುಜ್ಜೀವನಕ್ಕಾಗಿ ಹೋರಾಟ ನಡೆಸುತ್ತಿದ್ದು, ಈಗ ಶತಮಾನೋತ್ಸವ ಹೆಜ್ಜೆಗಳಲ್ಲಿ ನೂತನ ಚೇತನ ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಘಟಕಗಳ ಮೂಲಕ ಭಾಷಾ ಬೋಧನೆ, ಕಲಾ–ಸಂಸ್ಕೃತಿ ಉತ್ತೇಜನ, ಪರಿಸರ ಸಂರಕ್ಷಣೆ, ಸಮಾಜಸೌಹಾರ್ದತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಮುಂಬೈ ವಿಕ್ರೋಲಿ ಘಟಕದ ಸಂಚಾಲಕರಾಗಿ ನೇಮಕಗೊಂಡಿರುವ ಚಂದ್ರಕೃಷ್ಣ ಶೆಟ್ಟಿ ಅವರ ನಾಯಕತ್ವದಲ್ಲಿ, ಸಮುದಾಯದ ಒಗ್ಗಟ್ಟು, ತುಳು ಭಾಷಾ–ಸಂಸ್ಕೃತಿ ಪ್ರಚಾರ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಹೊಸ ಬಲ ದೊರೆಯಲಿದೆ ಎಂದು ಮಹಾಸಭೆಯ ಕೇಂದ್ರ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.
ಅವರ ನೇಮಕಕ್ಕೆ ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಶ್ರೀ ಶ್ರೀಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುದಾಬಿ, ಹಾಗೂ ತುಳುವ ಮಹಾಸಭೆ ಬೃಹತ್ ಮುಂಬೈ ನಗರ ಸಂಚಾಲಕರಾದ ಅಡ್ವಕೇಟ್ ಮೊರ್ಲ ರತ್ನಾಕರ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.