ಅವ್ಯವಸ್ಥೆ ಆಗರವಾದ ಗದಗ ಜಿಮ್ಸ್ ಆಸ್ಪತ್ರೆ: ಫ್ಯಾನ್​, ಎಸಿ ಇಲ್ಲದೆ ಹಸುಗೂಸು, ಬಾಣಂತಿಯರು ನರಳಾಟ

0
87

ಗದಗ: ಸರ್ಕಾರಿ ಆಸ್ಪತ್ರೆ ಅಂದರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಗದಗ ಜಿಮ್ಸ್ (GIMS) ಆಸ್ಪತ್ರೆ ಮಾತ್ರ ರೋಗಿಗಳ ಪಾಲಿಗೆ ನರಕವಾಗಿದೆ. ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಇದ್ರಿಂದ ಧಗೆ ಸಿಕ್ಕಾಪಟ್ಟೆ ಆಗುತ್ತಿದೆ‌‌. ಆದರೆ ಆಸ್ಪತ್ರೆಯಲ್ಲಿ ಫ್ಯಾನ್​ಗಳು, ಎಸಿಗಳು ಕೆಟ್ಟು ಹೋಗಿವೆ. ಇದರಿಂದ ಬಾಣಂತಿಯರು ಹಾಗೂ ಕಂದಮ್ಮಗಳು ವಿಲವಿಲ ಅಂತ ಒದ್ದಾಡುತ್ತಿವೆ. ರಾತ್ರಿಯಾದರೆ ಗಾಳಿ ಇಲ್ಲದ ಕಾರಣ ಸೊಳ್ಳೆಗಳು ದಾಳಿ ಮಾಡುತ್ತಿವೆ. ಹೀಗಾಗಿ ಬಾಣಂತಿಯರು, ಪೋಷಕರು ಜಿಮ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗನ ಹೈಟೆಕ್ ಜಿಮ್ಸ್ ಆಸ್ಪತ್ರೆಯಲ್ಲಿ ಫ್ಯಾನ್​ಗಳು ಮತ್ತು ಎಸಿಗಳು ಕೆಟ್ಟು ಹೋಗಿದ್ದರಿಂದ ಬಾಣಂತಿಯರು ಗೋಳಾಡುವಂತಾಗಿದೆ. ದಿನ ನಿತ್ಯ 30-40 ಮಹಿಳೆರಿಗೆ ಹೆರಿಗೆ ಆಗುತ್ತವೆ. ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯ ಮಹಿಳೆಯರು ಹೆರಿಗೆ ಮಾಡಿಸಿಕೊಳ್ಳಲು ಜಿಮ್ಸ್ ಆಸ್ಪತ್ರೆಯಲ್ಲಿ ಬರುತ್ತಾರೆ.

ವೈದ್ಯರು ಚೆನ್ನಾಗಿದ್ದಾರೆಂಬ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಜಿಮ್ಸ್ ಆಸ್ಪತ್ರೆ ಫೇಮಸ್ ಆಗಿದೆ. ಆದರೆ ಆಸ್ಪತ್ರೆಯಲ್ಲಿ ಹೆರಿಗೆ ಆದ ಮೇಲೆ ವಾರ್ಡ್​ಗೆ ಬಾಣಂತಿಯರನ್ನ ಹಾಗೂ ನವಜಾತ ಶಿಶುಗಳನ್ನು ಶಿಫ್ಟ್ ಮಾಡುತ್ತಾರೆ. ಬಾಣಂತಿಯರ ವಾರ್ಡ್​ನಲ್ಲಿ ಮಾತ್ರ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ. ವಾರ್ಡ್ ಗಳಲ್ಲಿ ಫ್ಯಾನ್, ಎಸಿಗಳು ಕೆಟ್ಟು ಹೋಗಿವೆ. ಈವಾಗ ಬೇಸಿಗೆ ಆರಂಭವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿದೆ‌. ಆದರೆ ಬಾಣಂತಿಯರ ವಾರ್ಡ್​ನಲ್ಲಿರುವ ಎಸಿ ಹಾಗೂ ಫ್ಯಾನ್​ಗಳು ಮಾತ್ರ ಹತ್ತೋದೆ ಇಲ್ಲ. ಇದರಿಂದ ಧಗೆಯಿಂದ ಮಕ್ಕಳು, ಬಾಣಂತಿಯರು ನರಕ ಅನುಭವಿಸುತ್ತಿದ್ದಾರೆ.

ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಬಾಣಂತಿಯರ ವಾರ್ಡ್​ಗಳಲ್ಲಿ ಫ್ಯಾನ್​ ಹಾಗೂ ಎಸಿ ಕೆಟ್ಟು ಹೋಗಿವೆ. ಕಳೆದ ಒಂದು ವಾರದಿಂದ ಕೆಟ್ಟು ಹೋದರು ದುರಸ್ತಿ ಮಾತ್ರ ಮಾಡ್ತಾಯಿಲ್ವಂತೆ. ಹಗಲು-ರಾತ್ರಿ ಎನ್ನದೆ ಬಾಣಂತಿಯರು, ಹಸುಗೂಸುಗಳು ವಿಲವಿಲ ಅಂತ ನರಳಾಡುತ್ತಿದ್ದಾರೆ. ರಾತ್ರಿ ನಿದ್ರೆ ಸಹ ಮಾಡುತ್ತಿಲ್ಲ. ಇದ್ರಿಂದ ಮಕ್ಕಳಿಗೆ, ಬಾಣಂತಿಯರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಫ್ಯಾನ್​ ಬಂದ ಇರುವ ಕಾರಣ ಗಾಳಿ ಸಹ ಬರೋದಿಲ್ಲ. ತಾವೇ ರಟ್ಟಿನಿಂದ ಗಾಳಿ ಬಿಸಿ ಅಳುತ್ತಿರುವ ಹಸುಗೂಸುಗಳ ಸಮಾಧಾನ ಮಾಡುತ್ತಿದ್ದಾರೆ. ಕೆಲ ವಾರ್ಡ್​ಗಳಲ್ಲಿ ರೋಗಿಗಳೇ ಮನೆಯಿಂದ ಫ್ಯಾನ್ ತಂದು ಇಟ್ಕೊಂಡಿದ್ದಾರೆ. ಹೀಗಾಗಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಕೋಟ್ಯಂತರ ರೂ ಅನುದಾನ ನೀಡುತ್ತೆ. ಜಿಮ್ಸ್ ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಬಾಣಂತಿಯರು ಹಾಗೂ ನವಜಾತ ಶಿಶುಗಳು ಪರದಾಡುವಂತಾಗಿದೆ. ಹೀಗಾಗಿ ಆದಷ್ಟು ಬೇಗ ಫ್ಯಾನ್​​ ಹಾಗೂ ಎಸಿ ದುರಸ್ತಿ ಮಾಡಿ, ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

LEAVE A REPLY

Please enter your comment!
Please enter your name here