ಮಂಗಳೂರು : ಕಂಬಳ ಕ್ಷೇತ್ರದಲ್ಲಿ ರಾಜನಾಗಿ ಮೆರೆದ ಚೆನ್ನ ವಿಧಿವಶನಾಗಿದ್ದಾನೆ. ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಕಿಂಗ್ ಚೆನ್ನ ಇನ್ನು ನೆನಪು ಮಾತ್ರ. ತರಬೇತಿಯಿಲ್ಲದೆ 4 ರ ಹರೆಯದಲ್ಲೇ ಕಂಬಳಕ್ಕೆ ಇಳಿದಿದ್ದ ಚೆನ್ನ ಕಂಬಳಾಭಿಮಾನಿಗಳಿಗೆ ಅಚ್ಚುಮೆಚ್ಚಿನವನಾಗಿದ್ದ. ಹಲವಾರು ಪದಕ ಗೆದ್ದಿರುವ ಕೀರ್ತಿ ಅವನದು.
ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಚೆನ್ನನನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಸುಮಾರು 22 ವರ್ಷಗಳ ಹಿಂದೆ ತಮ್ಮ ಹಟ್ಟಿಗೆ ತಂದಿದ್ದರು. ಮೂಡಬಿದಿರೆಯ ಕೋಟಿ-ಚೆನ್ನಯ ಕಂಬಳದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟಿಯವರಿಗೆ ಚೆನ್ನ ಪದಕ ಗೆದ್ದು ಕೊಟ್ಟಿದ್ದ. ಬಳಿಕ ಸೀನಿಯರ್ ಆದಾಗ ಚೆನ್ನ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ರ ಹಟ್ಟಿಗೆ ತೆರಳಿದ್ದ.

ಹಗ್ಗ ಹಿರಿಯ ವಿಭಾಗದಲ್ಲಿ ಗೆಂದಬೆಟ್ಟು ಮೋಡೆ ಮತ್ತು ಚೆನ್ನ ಜೊತೆಯಾಗಿ ಹಲವಾರು ಪ್ರಶಸ್ತಿ ಗೆದ್ದಿದ್ದಾರೆ. ನಾಲ್ಕು ಬಾರಿ ಸರಣಿ ಶೇಷ್ಠ ಪ್ರಶಸ್ತಿ ಪಡೆದಿರುವ ಚೆನ್ನ ಸತತ 13 ವರ್ಷ ಪದಕ ಗೆದ್ದು ಬೀಗಿದ್ದಾನೆ.
ಸಾಧು ಸ್ವಭಾವದವನಾಗಿದ್ದ ಚೆನ್ನ ಮತ್ತೊಂದು ವಿಚಾರಕ್ಕೆ ಗಮನಸೆಳೆದಿದ್ದ. ಕಂಬಳದ ದಿನ ಹಟ್ಟಿಯಲ್ಲಿ ಬಿಟ್ಟ ಕೂಡಲೇ ಅವನು ಮನೆಯ ತುಳಸಿ ಕಟ್ಟೆಗೆ ಸುತ್ತು ಬಂದು ಟೆಂಪೋ ಏರುತ್ತಿದ್ದ.
ಚೆನ್ನನಿಗೆ ಅಂದಾಜು 25 ವರ್ಷ ವಯಸ್ಸಾಗಿದ್ದು, ಕಳೆದ ಮೂರು ವರ್ಷದಿಂದ ಓಡುತ್ತಿರಲಿಲ್ಲ. ವಿಶ್ರಾಂತಿಯಲ್ಲಿದ್ದ ಚೆನ್ನ ಇದೀಗ ಇಹಲೋಕ ತ್ಯಜಿಸಿದ್ದಾನೆ. ಚೆನ್ನನ ಅಗಲಿಕೆ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.