ಮಂಗಳೂರು : ‘ಸ್ಕ್ರೀನ್ ಅಕಾಡೆಮಿ’, ತನ್ನ ಬಹುನಿರೀಕ್ಷಿತ ‘ಚೇತಕ್ ಸ್ಕ್ರೀನ್ ಅವಾಡ್ರ್ಸ್ ನ 31 ವಿಭಾಗಗಳ ಸಂಪೂರ್ಣ ನಾಮನಿರ್ದೇಶಿತರ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 5 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ 2025ರ ಸಾಲಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಹಿಂದಿ ಚಲನಚಿತ್ರಗಳು ಮತ್ತು ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಆದಿತ್ಯ ಧರ್ ಅವರ ಸ್ಪೈ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಒಟ್ಟು 24 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೋಹಿತ್ ಸೂರಿ ಅವರ ‘ಸೈಯಾರ’ (17 ನಾಮನಿರ್ದೇಶನ) ಮತ್ತು ನೀರಜ್ ಘೈವಾನ್ ಅವರ ‘ಹೋಮ್ ಬೌಂಡ್’ (15 ನಾಮನಿರ್ದೇಶನ) ಸಿನಿಮಾಗಳಿವೆ. ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳನ್ನು ಒಳಗೊಂಡಿರುವ ಈ ಪಟ್ಟಿಯು ಸಮಕಾಲೀನ ಭಾರತೀಯ ಸಿನಿಮಾಗಳ ವಿಸ್ತಾರ ಮತ್ತು ವಿಕಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು 50ಕ್ಕೂ ಹೆಚ್ಚು ಖ್ಯಾತ ಚಲನಚಿತ್ರ ಪರಿಣತರು, ಕಲಾವಿದರು ಮತ್ತು ಸಾಂಸ್ಕøತಿಕ ಗಣ್ಯರನ್ನು ಒಳಗೊಂಡ ಸ್ವತಂತ್ರ, ಲಾಭರಹಿತ ಸಂಸ್ಥೆಯಾದ ‘ಸ್ಕ್ರೀನ್ ಅಕಾಡೆಮಿ’ ನಿರ್ವಹಿಸುತ್ತದೆ.
ಅಕಾಡೆಮಿಯ ಶೇ. 95 ಕ್ಕಿಂತ ಹೆಚ್ಚು ಸದಸ್ಯರು ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ನಿಷ್ಪಕ್ಷಪಾತ ಮತ್ತು ತಟಸ್ಥತೆಯನ್ನು ಖಚಿತಪಡಿಸಿಕೊಳ್ಳಲು ‘ಟ್ರಿಮ್ಡ್ ಮೀನ್ (ಒಲಿಂಪಿಕ್)’ ವಿಧಾನವನ್ನು ಬಳಸಿ, ಪ್ರತಿ ವಿಭಾಗವನ್ನು ಸರಾಸರಿ 38-40 ಸದಸ್ಯರು ಮೌಲ್ಯಮಾಪನ ಮಾಡಿದ್ದಾರೆ ಎಂದು ತಿಳಿಸಿದೆ.
ಇದೇ ಮೊದಲ ಬಾರಿಗೆ, ಚಲನಚಿತ್ರ ಪ್ರಶಸ್ತಿ ಸಮಾರಂಭವೊಂದು ನೇರ ಪ್ರಸಾರವಾಗುತ್ತಿದೆ. ಯೂಟ್ಯೂಬ್ ಜೊತೆಗಿನ ವಿಶೇಷ ಸಹಭಾಗಿತ್ವದೊಂದಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭವು ಜಾಗತಿಕ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಸೋನಿ ಎಂಟರ್ ಟೈನ್ ಮೆಂಟ್ ಟೆಲಿವಿಷನ್ ಮತ್ತು ಸೋನಿ ಲೈವ್ ಚಾನೆಲ್ ಗಳಲ್ಲೂ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರವಿರಲಿದೆ ಎಂದು ವಿವರಿಸಿದೆ.

