ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ

0
272

ಮಂಗಳೂರು: ಕಾನೂನಿನ ನೆಪವೊಡ್ಡಿ ಪ್ರಸಿದ್ಧ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕ ಕ್ಕೆ ಖಾಕಿ ತಡೆ ವಿಚಾರವೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭಯ ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ.

ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ, 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ, ಮನವರಿಕೆ ಮಾಡಿದರೂ ಪೊಲೀಸರು ಒಪ್ಪಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ. ದೈವವೇ ದಾರಿ ತೋರಿಸಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದೆ. ಯಾಕೆ ಈ ಬಾರಿ ಕೋಳಿ ಅಂಕ ನಡೆದಿಲ್ಲ ಎಂದು ದರ್ಶನದ ವೇಳೆ ದೈವಗಳು ಪ್ರಶ್ನೆ ಮಾಡಿದ್ದು, ಪೊಲೀಸ್‌ ಇಲಾಖೆಯಿಂದ ಕೋಳಿ ಅಂಕಕ್ಕೆ ತಡೆ ಎಂದು ಭಕ್ತರು ತಿಳಿಸಿದ್ದಾರೆ.

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಾರ್ಣಿಕದ ಕತೆ ಬಹಳ ಇದ್ದು,1997ರ ಆಯೋಧ್ಯೆ ರಾಮ ಮಂದಿರ ವಿವಾದದ ಕರ್ಫ್ಯೂ ವೇಳೆಯೂ ಇಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಕೊರೊನಾ ಸಂದರ್ಭದಲ್ಲೂ ಆಯೋಜಿಸಲಾಗಿತ್ತು. ದೈವಗಳಿಗೆ ಪ್ರಾರ್ಥನೆ ಬೆನ್ನಲ್ಲೆ ಎಲ್ಲಾ ಅಡೆತಡೆಗಳು ಪರಿಹಾರವಾಗಿತ್ತು. ಇದೀಗ ಮತ್ತೆ ಕೋಳಿ ಅಂಕವನ್ನ ಸುಸೂತ್ರವಾಗಿ ನಡೆಸೋದಾಗಿ  ದೈವ ನುಡಿ ಕೊಟ್ಟಿದೆ. ಜೂಜು ನಡೆದರೆ ಪೊಲೀಸರು ಕ್ರಮ ಕೈಗೊಳಲಿ. ಆದ್ರೆ ಭಕ್ತರ ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸಬಾರದು ಎಂದು ಕೋಳಿ ಅಂಕಕ್ಕೆ ತಡೆ ವಿಚಾರವಾಗಿ ಗರಡಿ ಕ್ಷೇತ್ರದ ಟ್ರಸ್ಟಿ ಚಂದ್ರನಾಥ್ ಅತ್ತಾವರ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here