ತಮ್ಮದೇ ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡಿದ ಉಡುಪಿ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆಗಳು : ದಿನೇಶ್ ಅಮೀನ್ ಲೇವಡಿ

0
103

ಉಡುಪಿ ಕಾಂಗ್ರೆಸ್ ಪಕ್ಷದ ಮುಖಂಡರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ತಮ್ಮದೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪರಿಸ್ಥಿತಿಗೆ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 399 ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಮಲತಾಯಿ ಧೋರಣೆಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಿಂದ ವಿಚಲಿತರಾದ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ತಮ್ಮದೇ ಸರ್ಕಾರ ಆಡಳಿತ ಮಾಡುತ್ತಿದೆ ಎಂಬುದನ್ನೇ ಮರೆತಂತೆ ಪ್ರತಿಭಟನೆಯ ನಾಟಕ ವಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಉಡುಪಿ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ಹತಾಶೆಯ ಪರಮಾವಧಿಯನ್ನು ಮೀರಿ ಕ್ಷುಲ್ಲಕ ಭಾಷಣ ಮಾಡಿ ತಮ್ಮ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಶಾಸಕರು ಅಭಿವೃದ್ಧಿ ಯೋಜನೆಗಳ ಬಗ್ಗೆ ಹಲವು ಬಾರಿ ರಾಜ್ಯ ಸರಕಾರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಉಡುಪಿ ಜಿಲ್ಲಾಸ್ಪತ್ರೆ ಕಟ್ಟಡ ಪೂರ್ಣಗೊಳಿಸಲು ಬಾಕಿ ಅನುದಾನದ ಬಗ್ಗೆ ಚಕಾರವೆತ್ತದ ಪ್ರಸಾದ್ ಕಾಂಚನ್, ಉಡುಪಿ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಉಪದೇಶ ನೀಡಲು ಮುಂದಾಗಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದ ಅಭಿವೃದ್ಧಿಯನ್ನು ಸರಕಾರ ಬಲಿಕೊಟ್ಟಿದೆ, ರಸ್ತೆ, ಕಾಲುಸಂಕ ನಿರ್ಮಾಣಕ್ಕೆ ಹಣ ಇಲ್ಲ, ಗ್ಯಾರಂಟಿ ಯೋಜನೆಯನ್ನೇ ರದ್ದು ಮಾಡಬೇಕು, ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ರಾಜ್ಯ ಸರಕಾರದ ಈ ಅವೈಜ್ಞಾನಿಕ ಹಣಕಾಸು ನೀತಿಯನ್ನು ಪ್ರಶ್ನಿಸುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಮೂಲಕ ಪ್ರಸಾದ್ ಕಾಂಚನ್ ತಮ್ಮ ರಾಜಕೀಯ ಅಪ್ರಬುದ್ಧತೆಗೆ ಸ್ವಯಂ ಸಾಕ್ಷಿ ನೀಡಿದ್ದಾರೆ.

ತನ್ನದೇ ಬಡಾನಿಡಿಯೂರು ಗ್ರಾಮದ ಯುವಕ ಮಂಡಲದವರು ಕಳೆದ ವರ್ಷ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಪ್ರತಿಭಟನೆ ನಡೆಸಿ ನ್ಯಾಯ ಒದಗಿಸುವಂತೆ ಪ್ರಸಾದ್ ಕಾಂಚನ್ ಬಳಿ ಮನವಿ ಮಾಡಿದರೂ ಇದುವರೆಗೆ ಸ್ಪಂದಿಸದೆ ತನ್ನ ಒಳ ಒಪ್ಪಂದ ರಾಜಕೀಯಕ್ಕಾಗಿ ತಮ್ಮದೇ ಊರಿನ ಜನತೆಗೆ ನ್ಯಾಯ ನೀಡಲು ಸಾಧ್ಯವಾಗದ ನಿಮಗೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸುವ ನೈತಿಕತೆ ಇದೆಯೇ? ಈ ಬಗ್ಗೆ ನಿಮ್ಮದೇ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ನೀಡಲು ಜಾಣ ಮೌನ ವಹಿಸಿರುವ ನಿಮ್ಮ ನಡೆಯಿಂದ ಜನತೆಯ ಮೇಲಿನ ಕಾಳಜಿಯ ನಿಮ್ಮ ಮುಖವಾಡ ಕಳಚಿ ಬಿದ್ದಿದೆ.

ಜನರ ಸಮಸ್ಯೆಗಳ ಪರಿಹಾರದ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತ್ 9/11 ಸಮಸ್ಯೆಗಳ ಬಗ್ಗೆ ತಮ್ಮದೇ ಸರಕಾರದ ಸಚಿವರ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಬದಲು ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆಯ ನಾಟಕವಾಡಿ ಜನರಿಗೆ ತಪ್ಪು ಸಂದೇಶ ನೀಡಲು ಹೊರಟರೆ ಉಡುಪಿಯ ಪ್ರಜ್ಞಾವಂತ ಜನತೆ ಇದನ್ನೆಲ್ಲಾ ನಂಬುವುದಿಲ್ಲ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here