ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ಮದುವೆ ಸಂಭ್ರಮ

0
2


ಉಡುಪಿ : ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಇಬ್ಬರು ಅನಾಥ ಹೆಣ್ಣು ಮಕ್ಕಳು ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ಜಿಲ್ಲಾಡಳಿತ ನೇತೃತ್ವದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಮುಂದೆನಿಂತು ಕನ್ಯಾದಾನ ಮಾಡಿದ್ದಾರೆ.
ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ನಿವಾಸಿನಿ ಮಲ್ಲೇಶ್ವರಿ ಅವರ ವಿವಾಹವು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ಸಂಜಯ ಪ್ರಭು ಅವರೊಂದಿಗೆ ಹಾಗೂ ಸುಶೀಲ ಅವರ ವಿವಾಹವು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕೃಷ್ಣಾಪುರ ಗ್ರಾಮದ ನಾಗರಾಜ ಅವರೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಮಹಿಳಾ ನಿಲಯದ ಹೆಣ್ಣು ಮಕ್ಕಳ ಜೀವನ ರೂಪಿಸಲು ಸರಕಾರದ ವತಿಯಿಂದ ಅವರುಗಳಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ, ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಅವರುಗಳ ಇಚ್ಛೆಗೆ ಅನುಸಾರವಾಗಿ ವರ ಬಂದಲ್ಲಿ ಹುಡುಗನ ಪೂರ್ವಾಪರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿವಾಹ ಮಾಡಿಕೊಡಲಾಗುವುದು. ಇಂದು ನಿಲಯದಲ್ಲಿ ನಡೆದ ಮದುವೆಯನ್ನು ಹಿಂದೂ ಸಂಪ್ರದಾಯದAತೆ ನಡೆಸಿಕೊಡಲಾಗಿದೆ. ಮದುವೆಯ ನಂತರ ವಿವಾಹವನ್ನು ನೋಂದಣಿ ಮಾಡಲಾಗುವುದು. ನಿಲಯದ ನಿವಾಸಿನಿಯರಿಗೆ ವಿವಾಹ ಪ್ರೋತ್ಸಾಹಧನವಾಗಿ 50,000 ರೂ.ಗಳನ್ನು ಅವರುಗಳ ಹೆಸರಿನಲ್ಲಿ ಠೇವಣಿ ಇಟ್ಟು, ನಿರಂತರ ಮೂರು ವರ್ಷಗಳ ಕಾಲ ಇಲಾಖೆಯು ವಧು-ವರರ ಮುಂದಿನ ಜೀವನದ ಮೇಲೆ ನಿಗಾ ವಹಿಸಲಿದೆ. ನಂತರದಲ್ಲಿ ಸಂಸ್ಥೆಯ ನಿವಾಸಿನಿಯರ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದರು.
ನಿವಾಸಿನಿ ಮಲ್ಲೇಶ್ವರಿಯು ಕಾಲೇಜು ವಿದ್ಯಾಭ್ಯಾಸ ನಡೆಸುತ್ತಿದ್ದು, ಮೂರನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರ ಕೈಹಿಡಿದ ದ.ಕ. ಜಿಲ್ಲೆಯ ಮೂಲ್ಕಿಯ ಚಿ.ಸಂಜಯ ಪ್ರಭು ಅವರು, ಎಂ.ಕಾA ವಿದ್ಯಾಭ್ಯಾಸ ಪೂರೈಸಿ, ಐ.ಬಿ.ಎಂ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಇನ್ನೋರ್ವ ನಿವಾಸಿನಿ ಸುಶೀಲ ಇವರು ಮೂಗಿ ಮತ್ತು ಕಿವುಡಿಯಾಗಿದ್ದು, ಎಲ್ಲಾ ನ್ಯೂನ್ಯತೆಯನ್ನು ಮೆಟ್ಟಿನಿಂತು ಇತರರಂತೆ ನಿಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರನ್ನು ವರಿಸಿದ ಹಾಸನದ ನಾಗರಾಜ ಅವರು ಸ್ವಂತ ಉದ್ಯೋಗ ನಿರ್ವಹಿಸುತ್ತಿದ್ದು, ಈ ಎರಡೂ ಮದುವೆಯಲ್ಲಿ ವರನ ಹಿನ್ನೆಲೆಯನ್ನು ಪರಿಶೀಲಿಸಿ, ನಿವಾಸಿನಿಯರ ಒಪ್ಪಿಗೆಯೊಂದಿಗೆ, ಮಹಿಳಾ ನಿಲಯದಲ್ಲಿ ಈ ಶುಭಕಾರ್ಯವನ್ನು ನೆರವೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಮಾತನಾಡಿ, ಈಗಾಗಲೇ 25 ಮದುವೆಗಳನ್ನು ಯಶಸ್ವಿಯಾಗಿ ಪೂರೈಸಿ, 26 ಮತ್ತು 27 ನೇ ಮದುವೆಯನ್ನು ಅದ್ಧೂರಿಯಿಂದ ನಡೆಸುತ್ತಿರುವುದು ನಿಟ್ಟೂರಿನ ರಾಜ್ಯ ಮಹಿಳಾ ನಿಲಯದ ಹೆಗ್ಗಳಿಕೆ. ನಿಲಯದಲ್ಲಿ ಮದುವೆಗಳು ಹೆಚ್ಚಾದಂತೆ ವಧುವನ್ನು ಅರಸಿ ಕರೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ ಎಂದರು.
ಮದುವೆಗಾಗಿ ಸಿಹಿ ಖಾದ್ಯಗಳೊಂದಿಗೆ ಭರ್ಜರಿ ಭೋಜನವನ್ನೂ ಸಹ ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here