ಬಿಹಾರ: ಖಾತೆಗಳಿಗೆ ಕೆಲವೊಂದು ಬಾರಿ ದೊಡ್ಡ ಮೊತ್ತ ಜಮೆ ಆಗುತ್ತದೆ. ಇದು ತಾಂತ್ರಿಕ ದೋಷವೋ ಅಥವಾ ಸ್ಕ್ಯಾಮ್ ಎಂಬುದು ತಿಳಿಯುವುದಿಲ್ಲ, ಅನಾಮಿಕ ಖಾತೆಗೆ ಕೋಟಿ ಕೋಟಿ ಹಣ ಜಮೆ ಆಗಿರುವ ಅದೆಷ್ಟೋ ಘಟನೆಗಳ ಬಗ್ಗೆ ಕೇಳಿರಬಹುದು. ಇದೀಗ ಅಂತಹದೇ ಒಂದು ಘಟನೆ ಅನುಭವ ಬಿಹಾರದ ವ್ಯಕ್ತಿಗೆ ಆಗಿದೆ. ಬಿಹಾರದಿಂದ ರಾಜಸ್ಥಾನದ ಗಂಗಾಪುರ ನಗರಕ್ಕೆ ಕೂಲಿ ಕೆಲಸ ಮಾಡಲು ಬಂದಿದ್ದ ತೇನಿ ಮಾಂಝಿ ಎಂಬುವವರ ಖಾತೆಗೆ 10, 01, 35, 60, 00, 00, 00, 00, 50, 01, 00, 23, 56, 00, 00, 00, 28, 844 ರೂ.ಗಳು ಜಮೆ ಆಗಿದೆ. ಇಷ್ಟು ದೊಡ್ಡ ಮೊತ್ತವನ್ನು ನೋಡಿ ಶಾಕ್ ಆಗಿದ್ದಾರೆ. ತೇನಿ ಮಾಂಝಿ ಈ ಬಗ್ಗೆ ಎನ್ಡಿಟಿವಿಗೆ ಹಂಚಿಕೊಂಡಿದ್ದಾರೆ. ಇಷ್ಟು ಹಣವನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ನನಗೆ ಏನೂ ಅರ್ಥವಾಗಲಿಲ್ಲ. ನಾನು ನನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದೆ. ಅವರು ಪೊಲೀಸ್ ಠಾಣೆಗೆ ವರದಿ ಮಾಡಲು ಸಲಹೆ ನೀಡಿದರು. ನಮಗೆ ಬ್ಯಾಂಕಿನಿಂದಲೂ ಯಾವುದೇ ಕರೆ ಬರಲಿಲ್ಲ. ನಾನು ನನ್ನ ಖಾತೆಯನ್ನು ಪದೇ ಪದೇ ಪರಿಶೀಲಿಸುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು ನನ್ನ ಬಳಿ ಎಟಿಎಂ ಕಾರ್ಡ್ ಕೂಡ ಇರಲಿಲ್ಲ. ಈ ಎಟಿಎಂ ಕಾರ್ಡ್ 5 ತಿಂಗಳ ಹಿಂದೆ ಕಳೆದುಹೋಗಿತ್ತು. ಬ್ಯಾಂಕ್ನಲ್ಲಿ ಈ ಬಗ್ಗೆ ತಿಳಿಸಿದ್ದೆ, ಅಂದಿನಿಂದ ನನಗೆ ಹೊಸ ಎಟಿಎಂ ಕಾರ್ಡ್ ಸಿಕ್ಕಿಲ್ಲ. ಇನ್ನು ಈ ಹಣವನ್ನು ನಾನು ಬೇರೆ ಖಾತೆಗೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದೆ, ಅದು ವರ್ಗಾವಣೆಯಾಗುತ್ತಿರಲಿಲ್ಲ. ಬೇರೆಯವರ ಖಾತೆಗೆ ಜಮೆ ಮಾಡಲು ಹಲವು ಜನ ಸಲಹೆ ನೀಡಿದ್ರು, ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದ್ರು ಅದು ಮತ್ತೆ ನನ್ನ ಖಾತೆಗೆ ಬಂದು ಬೀಳುತ್ತಿತ್ತು. ಮಂಗಳವಾರ (ಆಗಸ್ಟ್ 5) ಮಾಧ್ಯಮಗಳಲ್ಲಿ ಸುದ್ದಿ ಬಂದಾಗ, ಸುಮಾರು ಒಂದು ಗಂಟೆಯ ನಂತರ ಬ್ಯಾಲೆನ್ಸ್ ಶೂನ್ಯ ಎಂದು ತೋರಿಸಿದೆ ಎಂದು ಹೇಳಿದ್ದಾರೆ.