ಹೆಂಡತಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಕ್ರೂರ ಪತಿ

0
125

ಕಲಬುರಗಿ : ಜಿಲ್ಲೆಯ ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಆಕೆಯ ಶವದ ಮೇಲೆ ಕಾರು ಹರಿಸಿ ವಿಕೃತಿ ಮೆರೆದಿದ್ದಾನೆ.

ಮಹಾರಾಷ್ಟ್ರ ಮೂಲದ ಶೈಲಾ (28) ಕೊಲೆಯಾದ ಮಹಿಳೆ. ಈಕೆಯ ಪತಿ ಅಕ್ಷಯ್ ಬಂಧಿತ ಆರೋಪಿ. ದಂಪತಿಗಳು ಕಾರಿನಲ್ಲಿ ಮಹಾರಾಷ್ಟ್ರದತ್ತ ತೆರಳುತ್ತಿದ್ದಾಗ ಅಫಜಲಪುರ ತಾಲೂಕಿನ ಬಳೂರಿಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಕಾರು ನಿಲ್ಲಿಸಿದ ಅಕ್ಷಯ್, ಪತ್ನಿಯನ್ನು ಬಲವಂತವಾಗಿ ಕೆಳಗೆ ತಳ್ಳಿ ಮಾರಕಾಸ್ತ್ರಗಳಿಂದ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಪತಿಯ ಕೈಯಿಂದ ತಪ್ಪಿಸಿಕೊಳ್ಳಲು ಹೆದ್ದಾರಿ ಪಕ್ಕದ ಜೋಳದ ಹೊಲಕ್ಕೆ ಓಡುತ್ತಿದ್ದ ಪತ್ನಿಯನ್ನು ಕಾರಿನಲ್ಲಿ ಬೆನ್ನಟ್ಟಿ, ಆಕೆಯ ಮೇಲೆ ವೇಗವಾಗಿ ಕಾರು ಹರಿಸಿದ್ದಾನೆ. ಪರಿಣಾಮ ಶೈಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಫಜಲಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಹಂತಕನನ್ನು ಪೊಲೀಸರು ಪ್ರಾಣದ ಹಂಗು ತೊರೆದು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here