ಸಿಆರ್‌ಝಡ್‌ ಮರಳು ಇನ್ನು ಗಗನಕುಸುಮ..?

0
50

ಮಂಗಳೂರು :ಸಿಆರ್‌ಝಡ್‌ ಕಾಯ್ದೆಯಲ್ಲಿ ಬದಲಾವಣೆಯಾಗದ ವಿನಾ ಕರಾವಳಿ ಜಿಲ್ಲೆಗಳಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಇನ್ನು ವಾಣಿಜ್ಯ ಬಳಕೆಗೆ ಮರಳು ಲಭ್ಯವಾಗುವ ಸಾಧ್ಯತೆ ಕಡಿಮೆ. ಹೀಗೆನ್ನುವ ಮಾಹಿತಿ ಲಭ್ಯವಾಗುತ್ತಿದೆ. ಪದೇಪದೆ ಸಿಆರ್‌ಝಡ್‌ ಮರಳಿಗಾಗಿ ಹೋರಾಡಿರುವ ಅನೇಕರು ಇದು ಆಗುವ ಮಾತಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ.
ಕರಾವಳಿಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚು ಗುಣಮಟ್ಟದ ಹಾಗೂ ಸೂಕ್ತವೆಂದೇ ಭಾವಿಸಲಾಗಿರುವುದು ಸಿಆರ್‌ಝಡ್‌ ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿರುವ ಮರಳು. ಇದು ಸಣ್ಣಗಾತ್ರದ್ದಾಗಿದ್ದು ಸಾರಣೆ ಇತ್ಯಾದಿಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ, ನಾನ್‌ ಸಿಆರ್‌ಝಡ್‌ ಮರಳು ದೊರಗಾಗಿದ್ದು, ಅಷ್ಟಾಗಿ ಉಪಯೋಗವಾಗುವುದಿಲ್ಲ ಎನ್ನುವುದನ್ನು ಹಿಂದಿನಿಂದಲೂ ಗುತ್ತಿಗೆದಾರರು ಹೇಳುತ್ತಿದ್ದಾರೆ. ಹಾಗಾಗಿ ಮೂರು ವರ್ಷಗಳಿಂದ ಸಿಆರ್‌ಝಡ್‌ ಮರಳು ಸಿಗುತ್ತಿಲ್ಲ. ಸಿಆರ್‌ಝಡ್‌ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಅದರಲ್ಲಿರುವ ಅಂಶಗಳನ್ನು ಉಲ್ಲೇಖೀಸಿ, ರಾಷ್ಟ್ರೀಯ ಹಸುರು ನ್ಯಾಯಾಧಿಕರಣವು 2022ರಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳನ್ನು ವಾಣಿಜ್ಯ ಉದ್ದೇಶಕ್ಕೆ ತೆಗೆಯುವಂತಿಲ್ಲ ಎಂದು ಆದೇಶಿಸಿತ್ತು. ಇದರ ಬಳಿಕ ಕರಾವಳಿಯಲ್ಲಿ ಸಿಆರ್‌ಝಡ್‌ ಮರಳುಗಾರಿಕೆ ಸ್ಥಗಿತಗೊಂಡಿತ್ತು.
ಕಾಯ್ದೆ ಏನೆನ್ನುತ್ತದೆ ?
2019ರ ಸಿಆರ್‌ಝಡ್‌ ಅಧಿಸೂಚನೆಯ ಪ್ರಕಾರ ಸಿಆರ್‌ಝಡ್‌ ಭಾಗದ ನದಿಗಳಿಂದ ಮರಳು ತೆಗೆಯುವಂತಿಲ್ಲ, ಅದು ನಿಷೇಧಿತ ಚಟುವಟಿಕೆ. ಆದರೆ ಪರಿಸರ ಸಚಿವಾಲಯದ ನಿಯಮಾವಳಿಯಲ್ಲಿ ದೋಣಿಗಳ ಸಂಚಾರಕ್ಕೆ ಅಡಚಣೆಯಾಗುವ ನದಿ ಮರಳಿನ ದಿಬ್ಬಗಳನ್ನು ತೆರವು ಮಾಡಬಹುದು. ಆದರೆ ಆ ಮರಳನ್ನು ಬೀಚ್‌ ಪೋಷಣೆಗೆ (ಕಡಲತೀರದಲ್ಲಿ ಮರಳು ನಷ್ಟವಾದ ಕಡೆ) ಬಳಸಬೇಕು ಹೊರತು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂಬ ಅಂಶವಿದೆ. ಇದೇ ಅಂಶವನ್ನು ಉಲ್ಲೇಖೀಸಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಈ ವಿಚಾರವು ಕೇಂದ್ರ ಸರಕಾರದ ಪರಿಸರ ಸಚಿವಾಲಯದ ವ್ಯಾಪ್ತಿಗೆ ಬರುವ ಕಾರಣ ರಾಜ್ಯ ಸರಕಾರ ಏನೂ ಮಾಡುವಂತಿಲ್ಲ, ಏನಿದ್ದರೂ ಸಿಆರ್‌ಝಡ್‌ ಕಾಯಿದೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರಬೇಕಷ್ಟೆ ಎನ್ನುತ್ತಾರೆ ಅಧಿಕಾರಿಗಳು. ಈ ಕುರಿತಂತೆ ಕೇಂದ್ರ ಸರಕಾರದ ಪರಿಸರ ಸಚಿವಾಲಯದ ಕದ ತಟ್ಟುವ ಕೆಲಸವೂ ಆಗಿದೆ.

ನಿಯಮಾವಳಿ ಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕರಡು ಅಧಿಸೂಚನೆಯನ್ನು ಪರಿಸರ ಸಚಿವಾಲಯ ರಾಜ್ಯಗಳಿಗೆ ಕಳುಹಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಅದರಂತೆ ದ.ಕ, ಉಡುಪಿ ಎರಡೂ ಜಿಲ್ಲಾಡಳಿತಗಳೂ ವರ್ಷದ ಹಿಂದೆಯೇ ಆಕ್ಷೇಪಣೆಗಳನ್ನು ಸಲ್ಲಿಸಿವೆ. ಅದರಂತೆ ಸಿಆರ್‌ಝಡ್‌ ವ್ಯಾಪ್ತಿಯ ನದಿಗಳ ಮರಳು ದಿಬ್ಬ ತೆರವು ಮಾಡಿ, ಬೀಚ್‌ ಪೋಷಣೆಗೆ ಬಳಸಿ ಬಾಕಿ ಉಳಿದ ಮರಳನ್ನು ಜಿಲ್ಲಾ ಸಮಿತಿ ಅಥವಾ ಸರಕಾರದ ಅನುಮತಿ ಮೇರೆಗೆ ವಿಲೇವಾರಿ ಮಾಡುವ ಅವಕಾಶ ನೀಡುವಂತೆ ಕೋರಲಾಗಿತ್ತು. ಇದು ಅಂತಿಮವಾಗಿ ಅಧಿಸೂಚನೆಯಲ್ಲಿ ಸೇರಿ ಆದೇಶ ಬರಬೇಕಿದೆ. ಆದರೆ ಇದು ಸದ್ಯ ಕಗ್ಗಂಟಾಗಿ ಉಳಿದುಕೊಂಡಿದೆ.

LEAVE A REPLY

Please enter your comment!
Please enter your name here