ಕರಾವಳಿಗೆ ಸೂಕ್ತ ಕಲ್ಲು ಮರಳು ನೀತಿ ಅಳವಡಿಸುವಂತೆ ಸಿ.ಡಬ್ಲ್ಯು.ಎಫ್. ಐ. ಒತ್ತಾಯ

0
55

ಮೂಡುಬಿದಿರೆ: ಕಲ್ಲು ಮತ್ತು ಮರಳು ಸಮರ್ಪಕವಾಗಿ ಸಿಗುವಂತೆ ಕರಾವಳಿಗೆ ಸೂಕ್ತ ನೀತಿಯನ್ನು ಅಳವಡಿಸಬೇಕೆಂದು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಯುಎಫ್‌ಐ) ಸಮಿತಿ ಒತ್ತಾಯಿಸಿದೆ.
ಮೂಡುಬಿದಿರೆ ಆಡಳಿತ ಸೌಧದ ಎದುರು ಜುಲೈ 21 ರಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಡಬ್ಯುಎಫ್‌ಐ ಜಿಲ್ಲಾಧ್ಯಕ್ಷ ವಸಂತ ಆಚಾರಿ, ಕೆಂಪು ಕಲ್ಲು, ಮರಳು ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದರಿಂದ ಕೆಂಪು ಗಣಿಗಾರಿಕೆ ಮತ್ತು ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇವುಗಳಿಗೆ ಸಂಬಂಧಪಟ್ಟ ಮಾಫಿಯ, ದಂಧೆಗಳನ್ನು ತಡೆಯುವ ಭರದಲ್ಲಿ ಬಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಜನಪ್ರತಿನಿಧಿಗಳು, ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಫಿಯಗಳಲ್ಲಿ ಶಾಮೀಲು ಆಗುವುದರಿಂದ ಇಲ್ಲಿಯವರೆಗೆ ಸೂಕ್ತ ನಿಯಮಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ತುರ್ತುಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 1.26 ಲಕ್ಷ ಜನ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಅವರ ಜೀವನೋಪಾಯಕ್ಕೆ ಸರ್ಕಾರ ಕನಿಷ್ಠ 10 ಸಾವಿರ ರೂ. ಪರಿಹಾರಧನವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ಸಿಡಬ್ಯುಎಫ್ ತಾಲೂಕು ಕಾರ್ಯದರ್ಶಿ ಶಂಕರ್ ವಾಲ್ಪಾಡಿ, ಮುಖಂಡರಾದ ಕೃಷ್ಣಪ್ಪ ನಡಿಗುಡ್ಡೆ, ದಿವಾಕರ ಸುವರ್ಣ, ಮತ್ತಿತರರಿದ್ದರು.
ಹಳೇ ಪೊಲೀಸ್ ಠಾಣೆಯಿಂದ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here