ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೌಶಲ್ಯ ಹೆಚ್ಚಿಸಲು ಮತ್ತು ಸುಸ್ಥಿರ ಜೀವನೋಪಾಯಕ್ಕೆ ದಾರಿ ಮಾಡಿಕೊಡಲು ವಾರ್ಷಿಕ 350 ಯುವಕರಿಗೆ ತರಬೇತಿ ನೀಡುವ ಗುರಿ
ಬೆಳಗಾವಿ : ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್‌ನ ಸಿಎಸ್‌ಆರ್ ವಿಭಾಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಮತ್ತು ಡಾ. ಲಾಲ್ ಪ್ಯಾತ್ ಲ್ಯಾಬ್ಸ್ ಲಿಮಿಟೆಡ್ ನ ಸಿಎಸ್‌ಆರ್ ವಿಭಾಗವಾದ ಲಾಲ್ ಪ್ಯಾತ್ ಲ್ಯಾಬ್ಸ್ ಫೌಂಡೇಶನ್ ಸಂಸ್ಥೆಗಳು “ದೀಕ್ಷಾ – ಎಲ್‌ಪಿಎಲ್ ಅಕಾಡೆಮಿ ಫಾರ್ ಲ್ಯಾಬೊರೇಟರಿ ಮೆಡಿಸಿನ್” ಎಂಬ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಈ ಯೋಜನೆಯ ಭಾಗವಾಗಿ ಕರ್ನಾಟಕದ ಬೆಳಗಾವಿ ಮತ್ತು ಜಾರ್ಖಂಡ್ ನ ರಾಂಚಿಯಲ್ಲಿ ಈ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳು ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲು ‘ಫ್ಲೆಬೋಟಮಿ‘ (ರಕ್ತದ ಮಾದರಿ ಸಂಗ್ರಹಣೆ) ಕ್ಷೇತ್ರದಲ್ಲಿ ವಿಶೇಷ ತರಬೇತಿಯನ್ನು ನೀಡಲಿವೆ. ಈ ಕೇಂದ್ರಗಳು ಒಟ್ಟಾರೆಯಾಗಿ ವಾರ್ಷಿಕ 350 ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅವರಿಗೆ ಸುಸ್ಥಿರ ಜೀವನೋಪಾಯಕ್ಕೆ ಅವಕಾಶಗಳನ್ನು ಕಲ್ಪಿಸಲಿವೆ. ಬೆಳಗಾವಿ ಕೇಂದ್ರವೊಂದೇ ವಾರ್ಷಿಕವಾಗಿ 175 ಯುವಕರಿಗೆ ತರಬೇತಿ ನೀಡಲಿದೆ.
ಈ ತಿಳುವಳಿಕಾ ಪತ್ರಕ್ಕೆ ಎರಡೂ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಸಹಿ ಹಾಕಲಾಯಿತು. ಲಾಲ್ ಪ್ಯಾತ್ ಲ್ಯಾಬ್ಸ್ ಫೌಂಡೇಶನ್ ಪರವಾಗಿ ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ಶ್ರೀ ರಾಜೇಶ್ ಸಿಂಗ್ ಮತ್ತು ಸಿಎಸ್‌ಆರ್ ಉಪ ವ್ಯವಸ್ಥಾಪಕರಾದ ಶ್ರೀ ಆಶಿಶ್ ದಂಗಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಪರವಾಗಿ ಸಂಸ್ಥೆಯ ಸಿಇಒ ಶ್ರೀ ಅಶೋಕ್ ಕುಮಾರ್ ಗುಪ್ತಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಲ್ಮಿಯಾ ಭಾರತ್ ಫೌಂಡೇಶನ್ ನ ಸಿಇಓ ಶ್ರೀ ಅಶೋಕ್ ಕುಮಾರ್ ಗುಪ್ತಾ ಅವರು,“ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಕೌಶಲ್ಯಾಭಿವೃದ್ಧಿ ತರಬೇತಿಯು ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಕಾರ್ಯಪಡೆಯನ್ನು ನಿರ್ಮಿಸುವಲ್ಲಿ ಮತ್ತು ಗುಣಮಟ್ಟದ ಆರೋಗ್ಯ ಸೇವೆಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಲಾಲ್ ಪ್ಯಾತ್ ಲ್ಯಾಬ್ಸ್ ಫೌಂಡೇಶನ್ ಜೊತೆಗಿನ ನಮ್ಮ ಈ ಸಹಯೋಗವು, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಯುವಜನತೆಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

