ಬೆಳಗಾವಿ : ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ ನ ಸಮಾಜ ಸೇವಾ ಅಂಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಸಂಸ್ಥೆಯು ಟೈಮ್ಸ್ ಫೌಂಡೇಶನ್ ಸಂಸ್ಥೆಯು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಿಎಸ್‌ಆರ್ ಶೃಂಗಸಭೆ 2026ರಲ್ಲಿ ‘ವಿಶಿಷ್ಟ ನಾಯಕತ್ವ ಪುರಸ್ಕಾರ’ (ಡಿಸ್ಟಿಂಗ್ವಿಶ್ಡ್ ಲೀಡರ್ ಶಿಪ್ ಹಾನರ್) ಗೌರವಕ್ಕೆ ಪಾತ್ರವಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಇಓ ಆದ ಶ್ರೀ ಅಶೋಕ್ ಕುಮಾರ್ ಗುಪ್ತಾ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ, ಒಳಗೊಳ್ಳುವ ಶಿಕ್ಷಣವನ್ನು ಒದಗಿಸುವಲ್ಲಿ ಮತ್ತು ಸಮಾಜದಲ್ಲಿ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ದಾಲ್ಮಿಯಾ ಭಾರತ್ ಫೌಂಡೇಶನ್ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕೌಶಲ್ಯಾಭಿವೃದ್ಧಿ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಕೇಂದ್ರೀಕೃತ ಯೋಜನೆಗಳ ಮೂಲಕ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವಲ್ಲಿ ಫೌಂಡೇಶನ್ ಹೊಂದಿರುವ ನಿರಂತರ ಬದ್ಧತೆಯನ್ನು ಈ ಮನ್ನಣೆಯು ಎತ್ತಿ ತೋರಿಸುತ್ತದೆ.ಕಳೆದ ಹಲವು ವರ್ಷಗಳಿಂದ, ಫೌಂಡೇಶನ್ ಕೌಶಲ್ಯದ ಕೊರತೆಯನ್ನು ನೀಗಿಸಲು, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಅರ್ಥಪೂರ್ಣ ಜೀವನೋಪಾಯ ಅವಕಾಶವನ್ನು ಒದಗಿಸುವ ಮೂಲಕ ಅವರನ್ನು ಸಬಲಗೊಳಿಸಲು ಶ್ರಮಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ದಾಲ್ಮಿಯಾ ಭಾರತ್ ಫೌಂಡೇಶನ್ ನ ಸಿಇಓ ಅಶೋಕ್ ಕುಮಾರ್ ಗುಪ್ತಾ ಅವರು, “ಈ ಪುರಸ್ಕಾರವನ್ನು ಸ್ವೀಕರಿಸಲು ನಮಗೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ಈ ಗೌರವವು ಅರ್ಥಪೂರ್ಣ ಮತ್ತು ಶಾಶ್ವತ ಪ್ರಭಾವ ಬೀರಲು ಸಮಾಜದ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುವ ನಮ್ಮ ತಂಡಗಳು ಮತ್ತು ಪಾಲುದಾರರ ಅಚಲ ಬದ್ಧತೆಗೆ ದೊರೆತ ಗೌರವವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ದಾಲ್ಮಿಯಾ ಭಾರತ್ ಫೌಂಡೇಶನ್ ಸಮಾಜ ಬದಲಾವಣೆಯ ವೇಗವರ್ಧಕವಾಗಿ ಬೆಳೆದು ಬಂದಿದೆ. ಸಾವಿರಾರು ವ್ಯಕ್ತಿಗಳಿಗೆ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯವರಿಗೆ ಉದ್ಯೋಗ ಸಂಬಂಧಿ ಕೌಶಲಗಳು ಮತ್ತು ಸುಸ್ಥಿರ ಆದಾಯದ ಅವಕಾಶಗಳನ್ನು ಒದಗಿಸುವ ಮೂಲಕ ಭವಿಷ್ಯಕ್ಕೆ ಸಜ್ಜುಗೊಳಿಸುತ್ತಿದೆ. ನಮ್ಮ ಯೋಜನೆಗಳನ್ನು ವಿಸ್ತರಿಸಲು ಮತ್ತು ವ್ಯಕ್ತಿಗಳು ತಮ್ಮದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಭಾರತದ ಬೆಳವಣಿಗೆಗೆ ಕೊಡುಗೆ ನೀಡಲು ಸಶಕ್ತಗೊಳಿಸುವ ಹಾದಿಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಶೃಂಗಸಭೆಯ ಭಾಗವಾಗಿ ಶ್ರೀ ಗುಪ್ತಾ ಅವರು “ಕೌಶಲ್ಯ: ಸುಸ್ಥಿರ ಜೀವನೋಪಾಯಕ್ಕಾಗಿ ಎಂಎಸ್‌ಎಂಇಗಳು ಮತ್ತು ಯುವಕರ ಸಬಲೀಕರಣ” ಎಂಬ ವಿಷಯದ ಕುರಿತಾದ ಸಂವಾದದಲ್ಲಿ ಭಾಗವಹಿಸಿದರು. ಅಲ್ಲಿ ಅವರು ಉದ್ಯಮಕ್ಕೆ ಪೂರಕವಾದ ಕೌಶಲ್ಯಾಭಿವೃದ್ಧಿ, ಸಹಯೋಗದ ಪಾಲುದಾರಿಕೆಗಳು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಆಗುಗೊಳಿಸಲು ಸ್ಥಳೀಯ ಉದ್ಯಮ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವ ಪ್ರಾಮುಖ್ಯತೆಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕಳೆದ ಹಲವು ವರ್ಷಗಳಿಂದ, ದಾಲ್ಮಿಯಾ ಭಾರತ್ ಫೌಂಡೇಶನ್ ನ ಯೋಜನೆಗಳು ಬಹಳಷ್ಟು ಉತ್ತಮ ಪರಿಣಾಮ ಉಂಟು ಮಾಡಿವೆ. ಫೌಂಡೇಶನ್ ನ ಪ್ರಮುಖ ಕೌಶಲ್ಯಾಭಿವೃದ್ಧಿ ಯೋಜನೆಯಾದ ‘ದೀಕ್ಷಾ’ ಮೂಲಕ, ವಿವಿಧ ಭಾಗಗಳ 27,000ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ. ಅವರಿಗೆ ಉದ್ಯಮ-ಸಂಬಂಧಿತ ತರಬೇತಿ ಒದಗಿಸಿ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗಿದೆ. ‘ವೋವ್’ (ಡಬ್ಲ್ಯೂಓಡಬ್ಲ್ಯೂ – ವುಮೆನ್ ಆಫ್ ವರ್ತ್) ಯೋಜನೆಯು ಡಿಜಿಟಲ್ ಶಿಕ್ಷಣ ಮತ್ತು ಸಬಲೀಕರಣ ಯೋಜನೆಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಫೌಂಡೇಶನ್ ನ ನವೀನ ವಿಧಾನಕ್ಕೆ ಉದಾಹರಣೆಯಾಗಿದ್ದು, ಇದರ ಮೂಲಕ 4,243ಕ್ಕೂ ಹೆಚ್ಚು ವ್ಯಕ್ತಿಗಳು ಡಿಜಿಟಲ್ ಸಾಕ್ಷರತೆ ಮತ್ತು ಸಬಲೀಕರಣ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದಾರೆ.
ಹೆಚ್ಚುವರಿಯಾಗಿ, ‘ಗ್ರಾಮ ಪರಿವರ್ತನ್’ ಯೋಜನೆಯು ಗ್ರಾಮೀಣ ಭಾಗದ ರೂಪಾಂತರಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ. ಇದು ಕೃಷಿ, ಜಲ ಸಂರಕ್ಷಣೆ, ಕೌಶಲ ಅಭಿವೃದ್ಧಿ, ತೋಟಗಾರಿಕೆ, ಜಾನುವಾರು ನಿರ್ವಹಣೆ ಮತ್ತು ಕಿರು ಉದ್ಯಮಗಳ ಉತ್ತೇಜನದಂತಹ ಕಾರ್ಯಗಳ ಮೂಲಕ ಸಮುದಾಯದ ದೃಢತೆಯನ್ನು ಬಲಪಡಿಸುತ್ತದೆ ಮತ್ತು ಸುಸ್ಥಿರ ಜೀವನೋಪಾಯವನ್ನು ಕಲ್ಪಿಸುತ್ತದೆ. ಇಂತಹ ಕೇಂದ್ರೀಕೃತ ಯೋಜನೆಗಳ ಮೂಲಕ, ದಾಲ್ಮಿಯಾ ಭಾರತ್ ಫೌಂಡೇಶನ್ ಕೌಶಲ್ಯವರ್ಧನೆ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಸಮೃದ್ಧಿಯ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿಯ ವೇಗವರ್ಧಕವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದೆ.

