ಬೆಳಗಾವಿ ಘಟಕದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಉದ್ಯಮಿಗಳನ್ನು ಗೌರವಿಸಿದ ದಾಲ್ಮಿಯಾ ಸಿಮೆಂಟ್

0
23

ಬೆಳಗಾವಿ : ಭಾರತದ ಪ್ರಮುಖ ಸಿಮೆಂಟ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ (ಡಿಸಿಬಿಎಲ್) ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತನ್ನ ಬೆಳಗಾವಿ ಘಟಕದಲ್ಲಿ ತಮ್ಮ ವ್ಯವಹಾರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಸ್ಥಳೀಯ 22 ಮಹಿಳಾ ಉದ್ಯಮಿಗಳನ್ನು ಗೌರವಿಸಿದೆ.

ಕಂಪನಿಯು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಮತ್ತು ಸುತ್ತಮುತ್ತಲ ಸಮುದಾಯಗಳ 180 ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ, 8 ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಅವರ ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ವಿಸ್ತರಿಸಲು ಒಟ್ಟು ₹1.60 ಲಕ್ಷ ಒಕ್ಕೂಟ ಸಾಲವನ್ನು ವಿತರಿಸಲಾಯಿತು.

ಈ ಉದ್ಯಮಗಳಲ್ಲಿ ಎರಡು ಕಿರಾಣಿ ಅಂಗಡಿಗಳು, ಎರಡು ಸ್ಟೇಷನರಿ ಅಂಗಡಿಗಳು, ನಾಲ್ಕು ಟೈಲರಿಂಗ್ ಘಟಕಗಳು, ಮೂರು ಬಟ್ಟೆ ಅಂಗಡಿಗಳು, ನಾಲ್ಕು ಫುಟ್‌ ಪಾತ್ ತರಕಾರಿ ಅಂಗಡಿಗಳು, ಎರಡು ಗೃಹ ಕೈಗಾರಿಕೆಗಳು, ಎರಡು ಟೈಲರಿಂಗ್ ಟ್ಯೂಷನ್ ತರಗತಿಗಳು, ಎರಡು ಸಣ್ಣ ಅಂಗಡಿಗಳು ಮತ್ತು ಒಂದು ತಂಪು ಪಾನೀಯದ ಅಂಗಡಿಗಳು ಸೇರಿವೆ. ಇದರೊಂದಿಗೆ ಸ್ಥಳೀಯ ಮಹಿಳೆಯರು ತಯಾರಿಸಿದ ರೊಟ್ಟಿ, ಎಂಬ್ರಾಯ್ಡರಿ ಕೆಲಸಗಳು, ಹಪ್ಪಳ, ಬೇಕರಿ ಪದಾರ್ಥಗಳು ಮತ್ತು ವಿವಿಧ ಗೃಹ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನೂ ಆಯೋಜಿಸಲಾಗಿತ್ತು.

ದಾಲ್ಮಿಯಾ ಸಿಮೆಂಟ್ ಬೆಳಗಾವಿ ಘಟಕದ ಮುಖ್ಯಸ್ಥರಾದ ಶ್ರೀ ಪ್ರಭಾತ್ ಕುಮಾರ್ ಸಿಂಗ್ ಅವರು ದಾಲ್ಮಿಯಾ ಸಿಮೆಂಟ್‌ ನ ಅಧಿಕಾರಿಗಳು ಮತ್ತು ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದಾಲ್ಮಿಯಾ ಸಿಮೆಂಟ್ ಬೆಳಗಾವಿ ಘಟಕದ ಮುಖ್ಯಸ್ಥರಾದ ಪ್ರಭಾತ್ ಕುಮಾರ್ ಸಿಂಗ್ ಅವರು, “ಕುಟುಂಬಗಳು, ಸಮಾಜ ಮತ್ತು ಒಟ್ಟಾರೆ ಆರ್ಥಿಕತೆಯ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಸಾಕಷ್ಟಿದೆ. ಸಣ್ಣ ಉದ್ಯಮಗಳನ್ನು ಕಟ್ಟಿ ಜೀವನೋಪಾಯವನ್ನು ಕಂಡುಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಸ್ಫೂರ್ತಿದಾಯಕ ಬೆಳವಣಿಗೆಯಾಗಿದೆ. ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಮತ್ತು ಅವರ ಆಸೆಗಳನ್ನು ಪೂರೈಸಲು ಹೆಚ್ಚಿನ ಅವಕಾಶಗಳನ್ನು ಒದಗಿಸಲು ದಾಲ್ಮಿಯಾ ಸಿಮೆಂಟ್ ಬದ್ಧವಾಗಿದೆ,” ಎಂದು ತಿಳಿಸಿದರು.

ಕಳೆದ ಹಲವು ವರ್ಷಗಳಿಂದ, ಡಿಸಿಬಿಎಲ್ ತನ್ನ ಕಾರ್ಯಕ್ಷೇತ್ರದ ಸುತ್ತಮುತ್ತಲಿನ ಸಮಾಜದ ಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬೆಂಬಲಿಸುತ್ತಿದೆ. ಉದ್ಯಮಶೀಲತೆ ಅಭಿವೃದ್ಧಿ, ಕೃಷಿ ಬೆಂಬಲ, ಹಣಕಾಸು ಸಾಕ್ಷರತೆ ಮತ್ತು ‘ದೀಕ್ಷಾ’ ದಂತಹ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ, ಕಂಪನಿಯು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸಲು ಮತ್ತು ಸ್ಥಳೀಯ ಆರ್ಥಿಕತೆಗೆ ಅವರು ಅರ್ಥಪೂರ್ಣ ಕೊಡುಗೆ ನೀಡಲು ನಿರಂತರವಾಗಿ ಅವಕಾಶಗಳನ್ನು ಒದಗಿಸುತ್ತಿದೆ.

LEAVE A REPLY

Please enter your comment!
Please enter your name here