ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿಗೆ ಭೇಟಿ ನೀಡಿದ್ದು, ನಗರದಲ್ಲಿ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಬನ್ನಂಜಿಯಲ್ಲಿರುವ ಮೊದಲ ಪಾಯಿಂಟ್‌ನಲ್ಲಿ ಮೋದಿ ಅವರನ್ನು ಸ್ವಾಗತಿಸಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದರ್ಪಣ ನೃತ್ಯ ಸಂಸ್ಥೆಯ ಕಲಾವಿದರು ರಾಧಾಕೃಷ್ಣ ಕಾನ್ಸೆಪ್ಟ್ ಆಧರಿತ ನೃತ್ಯವನ್ನು ಪ್ರಸ್ತುತಪಡಿಸಲು ಸಜ್ಜಾಗಿದ್ದಾರೆ. ಒಟ್ಟು 24 ಕಲಾವಿದರ ತಂಡ ಪ್ರದರ್ಶನ ನೀಡಲಿದೆ. ಭದ್ರತಾ ಸಿಬ್ಬಂದಿಯಿಂದ ಸಂಪೂರ್ಣ ಪರಿಶೀಲನೆ ನಡೆಸಲಾಗಿದ್ದು, ನೃತ್ಯದ ವೇಷಭೂಷಣಗಳನ್ನು ಹೊಂದಿರುವ ಬ್ಯಾಗ್‌ಗಳನ್ನೂ ಕೂಲಂಕುಷವಾಗಿ ತಪಾಸಣೆ ಮಾಡಲಾಗಿದೆ. ವಾಹನ ಸೌಕರ್ಯದ ಕೊರತೆಯ ನಡುವೆಯೂ ಕಲಾವಿದರು ಕಾಲ್ನಡಿಗೆಯಲ್ಲಿ ಆಗಮಿಸಿ ಸಿದ್ಧತೆ ನಡೆಸುತ್ತಿದ್ದು, ಪ್ರಧಾನಮಂತ್ರಿಗಳ ಮುಂದೆ ಪ್ರದರ್ಶನ ನೀಡುವ ಅವಕಾಶ ಸಿಕ್ಕಿರುವುದಕ್ಕೆ ಕಲಾವಿದರು ಅತ್ಯಂತ ಉತ್ಸುಕರಾಗಿದ್ದಾರೆ.

