ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಪ್ ದುರಸ್ತಿಗಾಗಿ ತೆಗೆದಿರುವ ಜಾಗವನ್ನು ಎರಡು ತಿಂಗಳಾದರೂ ಇನ್ನೂ ಸರಿಯಾಗಿ ಮುಚ್ಚದೆ ಬಿಡಲಾಗಿದೆ ಎಂಬುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹೋಂಡಾ ಶೋರೂಮ್ ಹತ್ತಿರ ಹಾಗೂ ಹುಂಡೈ ಶೋರೂಮ್ ಎದುರುಗಡೆ ಇರುವ ಈ ಅಪಾಯಕಾರಿ ಸ್ಥಳದಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿರುವುದಾಗಿ ತಿಳಿದುಬಂದಿದೆ.
ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಈ ಗುಂಡಿ ಸ್ಪಷ್ಟವಾಗಿ ಕಾಣಿಸದೇ ವಾಹನ ಸವಾರರು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಸಣ್ಣ ನಿರ್ಲಕ್ಷ್ಯವೇ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದೆಂಬ ಭೀತಿ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.
“ಒಂದು ಸಣ್ಣ ನಿರ್ಲಕ್ಷ್ಯವೇ ಯಾರಾದರೂ ಕುಟುಂಬದ ಸಂತೋಷವನ್ನು ಕಳೆದುಹಾಕಬಹುದು. ರಸ್ತೆ ಕೇವಲ ಪ್ರಯಾಣದ ಮಾರ್ಗವಲ್ಲ, ಅನೇಕ ಜೀವಗಳ ಸುರಕ್ಷತೆ ಅದಕ್ಕೆ ಅವಲಂಬಿತವಾಗಿದೆ. ಈಗಾಗಲೇ ಅಪಘಾತಗಳು ನಡೆದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.
ಇದೇ ವೇಳೆ, ರಿಕ್ಷಾ ಚಾಲಕರಾದ ರೋಶನ್ ಡಿಸೋಜ ಅಮುಜ್ ಅವರು ಮಾತನಾಡಿ, “ಈ ಸಮಸ್ಯೆಯಿಂದ ದಿನನಿತ್ಯ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆ ಜಾಗವನ್ನು ಡಾಮರು ಹಾಕಿ ದುರಸ್ತಿ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ, ಒಂದು ಸಣ್ಣ ಕೆಲಸ ಅನೇಕ ಜೀವಗಳನ್ನು ಉಳಿಸಬಹುದಾದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

