ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು
ಭಾಸ್ಕರ್ ಕೋಟ್ಯಾನ್, ಕಿರಣ್ ಚಂದ್ರ ರಿಗೆ ಸಮಾಜ ಸೇವಾ ರತ್ನ ಅಜಯ್ ಶೆಟ್ಟಿ ಉದ್ಯಮ ರತ್ನ ಪ್ರದಾನ, ಅನ್ವಿತಾ ಪೂಜಾರಿ ಗೌರವ ಸನ್ಮಾನ

ದರೆಗುಡ್ಡೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ) ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಆರನೇ ವರ್ಷದ ಶನೀಶ್ವರ ಪೂಜೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಹಾಯಧನ ವಿತರಣೆ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ನ್ಯಾಯವಾದಿ ಶರತ್ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಗವದ್ಗೀತೆ ರಾಮಾಯಣದ ಮಹತ್ವವನ್ನು ತಿಳಿಸುವಂತಾಗಬೇಕು. ಶಿಕ್ಷಣದಲ್ಲಿ ಸಂಸ್ಕಾರ ವಿಲ್ಲದಿದ್ದಲ್ಲಿ ಉನ್ನತ ಶಿಕ್ಷಣ ಇದ್ದರು ಪ್ರಯೋಜನವಿಲ್ಲ. ಇಂದು ವೈದ್ಯಕೀಯ ಶಿಕ್ಷಣ ಪಡೆದವರಲ್ಲಿಯೂ ದೇಶದ್ರೋಹದ ಕೆಲಸಗಳನ್ನು ಮಾಡಿರುವವರನ್ನು ಕಾಣುತ್ತೇವೆ. ಹಿಂದೂ ಸಮಾಜ ಒಗ್ಗಟ್ಟನ್ನು ಪ್ರದರ್ಶಿಸಿ ಜಾತಿಯ ಹೆಸರಿನಲ್ಲಿ ಕಚ್ಚಾಟವನ್ನು ನಿಲ್ಲಿಸುವಂತಾಗಬೇಕು. ಪುರಾಣ ಕಾಲದಲ್ಲಿ ಇದ್ದ ವರ್ಣ ವ್ಯವಸ್ಥೆ ಮಾತ್ರ ಗಮನಿಸಬೇಕಾದುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜೆಗೋಳಿ ಮಾತನಾಡಿ ಹಿಂದೂ ಸಮಾಜ ಇಂದು ಹಿರಿಯರ ತ್ಯಾಗ ಪರಿಶ್ರಮದಿಂದಾಗಿ ನೆಮ್ಮದಿಯನ್ನು ಕಂಡಿದೆ. ಆದರೆ ಆಧುನಿಕ ಸಮಾಜದ ಸ್ಥಿತಿಗತಿಗಳನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಯಾವ ಸ್ಥಿತಿ ನಿರ್ಮಾಣಗೊಳ್ಳಬಹುದು ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ನಡತೆಯಲ್ಲಿ ಸುಧಾರಣೆ ಮಾಡಿಕೊಂಡು ಧರ್ಮ ಜಾಗೃತಿಯ ಮೂಲಕ ಒಗ್ಗಟ್ಟಾಗಿ ಬಾಳಿದಲ್ಲಿ ಮಾತ್ರ ಮುಂದಿನ ದಿನಗಳು ಸುಖಕರ ವಾಗಿರಬಹುದು ಎಂದು ಅಭಿಪ್ರಾಯ ಪಟ್ಟರು.
ಪ್ರಶಸ್ತಿ ಪ್ರದಾನ ಸಮಾರಂಭ
ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕೇರಿದ ಕೊಳಕ್ಕೆ ಇರ್ವ ತ್ತೂರು ಭಾಸ್ಕರ ಎಸ್ ಕೋಟ್ಯಾನ್ ಮತ್ತು ಬೆಳ್ತಂಗಡಿ ಡಿ. ಕಿರಣ್ ಚಂದ್ರ ಪುಷ್ಪಗಿರಿ ಅವರನ್ನು ಸಮಾಜ ಸೇವಾ ರತ್ನ ಪ್ರಶಸ್ತಿಯೊಂದಿಗೆ ಶಾಲು ಹಾರ ಪೇಟ ತೊಡಿಸಿ ಫಲವಸ್ತು ಸ್ಮರಣಿಕೆ ಸನ್ಮಾನ ಪತ್ರ ಸಹಿತ ಗೌರವಿಸಲಾಯಿತು. ಯುವ ಉದ್ಯಮಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲಕರಾದ ಅಜಯ್ ಶೆಟ್ಟಿ ಅವರಿಗೆ ಉದ್ಯಮ ರತ್ನ ಪ್ರಶಸ್ತಿಯೊಂದಿಗೆ ಶಾಲು ಹಾರ ಪೇಟ ತೊಡಿಸಿ ಫಲವಸ್ತು ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದ ಕ್ರೀಡಾಪಟು ಅನ್ವಿತ ವಿ ಪೂಜಾರಿ ಯವರನ್ನು ಶಾಲು ಹಾರ ಪೇಟ ತೊಡಿಸಿ ಫಲವಸ್ತು ಸನ್ಮಾನ ಪತ್ರದೊಂದಿಗೆ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ ಕಿರಣ್ ಚಂದ್ರ ಹಾಗೂ ಉದ್ಯಮಿ ಅಜಯ್ ಶೆಟ್ಟಿ ಅವರು ಜಾತಿ ಮತ ಭೇದ ಮರೆತು ಒಂದುಗೂಡಿ ಸಮಾಜದ ದೇಶದ ಏಳಿಗೆಗಾಗಿ ತಮ್ಮ ಕ್ಷೇತ್ರಗಳಲ್ಲಿ ಸೇವೆ ನೀಡುವ ಮೂಲಕ ಸಜ್ಜನ ವ್ಯಕ್ತಿತ್ವವನ್ನು ತೋರಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು. ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಶುಭಹಾರೈಸಿದರು.
ಸಮಾರಂಭದಲ್ಲಿ ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ, ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ, ಉದ್ಯಮಿ ಜಯಪ್ರಕಾಶ್, ಅಸ್ರಣ್ಣರಾದ ವೇ. ಮೂ. ನಾಗರಾಜ ಭಟ್ ಕರಾವಳಿ ಕೇಸರಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟು, ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷ ಬೇಬಿ ಚಿದಾನಂದ ಕುಕ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕರಾವಳಿ ಕೇಸರಿ ಬೆಳೆದು ಬಂದ ರೀತಿಯನ್ನು ತಿಳಿಸಿ ಸ್ವಾಗತಿಸಿದರು. ರಾಮ್ ಕುಮಾರ್ ಮಾರ್ನಾಡ್ ಹಾಗೂ ಗಣೇಶ್ ಪಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

