ಇದೊಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಪೂರ್ಣಿಮೆಯ ದಿನದಂದು ( 4 ಡಿಸೆಂಬರ್ 2025) ಮೃಗಶಿರಾ ನಕ್ಷತ್ರದಲ್ಲಿ ಸಾಯಂಕಾಲ ದತ್ತಾತ್ರೇಯನ ಜನನವಾಯಿತು. ಆದುದರಿಂದ, ಆ ದಿನ ಎಲ್ಲಾ ದತ್ತಕ್ಷೇತ್ರಗಳಲ್ಲಿ ದತ್ತನ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ.
೧. ದತ್ತ ಜಯಂತಿಯ ಮಹತ್ವ: ದತ್ತ ಜಯಂತಿಯ ದಿನದಂದು ದತ್ತತತ್ವವು ಭೂಮಿಯ ಮೇಲೆ ಇತರ ದಿನಗಳಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನದಂದು ದತ್ತನ ನಾಮಜಪ ಮತ್ತು ಉಪಾಸನೆಯನ್ನು ಮನಃಪೂರ್ವಕವಾಗಿ ಮಾಡುವುದರಿಂದ, ದತ್ತತತ್ವದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
೨. ಜನ್ಮೋತ್ಸವ ಆಚರಣೆ: ದತ್ತ ಜಯಂತಿಯನ್ನು ಆಚರಿಸಲು ಶಾಸ್ತ್ರೋಕ್ತವಾದ ನಿರ್ದಿಷ್ಟ ವಿಧಿವಿಧಾನಗಳು ಕಂಡುಬರುವುದಿಲ್ಲ. ಈ ಉತ್ಸವದ ಏಳು ದಿನಗಳ ಮೊದಲು ‘ಗುರುಚರಿತ್ರೆ’ಯ ಪಾರಾಯಣ ಮಾಡುವ ವಾಡಿಕೆಯಿದೆ. ಇದನ್ನೇ ‘ಗುರುಚರಿತ್ರೆ ಸಪ್ತಾಹ’ ಎಂದು ಕರೆಯುತ್ತಾರೆ. ಭಜನೆ, ಪೂಜೆ ಮತ್ತು ವಿಶೇಷವಾಗಿ ಕೀರ್ತನೆ ಮುಂತಾದ ಭಕ್ತಿ ಮಾರ್ಗಗಳು ಪ್ರಚಲಿತದಲ್ಲಿವೆ. ಮಹಾರಾಷ್ಟ್ರದ ಔದುಂಬರ, ನರಸೋಬಾವಾಡಿ, ಗಾಣಗಾಪುರ ಮುಂತಾದ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿದೆ. ತಮಿಳುನಾಡಿನಲ್ಲಿಯೂ ದತ್ತ ಜಯಂತಿಯ ಆಚರಣೆಯಿದೆ. ಕೆಲವು ಕಡೆ ಈ ದಿನ ‘ದತ್ತಯಾಗ’ವನ್ನೂ ಮಾಡಲಾಗುತ್ತದೆ.
ದತ್ತಯಾಗ : ದತ್ತಯಾಗದಲ್ಲಿ ಪವಮಾನ ಪಂಚಸೂಕ್ತದ ಆವರ್ತನೆಗಳು (ಜಪ) ಮತ್ತು ಅದರ ದಶಾಂಶ ಅಥವಾ ತೃತೀಯಾಂಶದಷ್ಟು ತುಪ್ಪ ಮತ್ತು ಎಳ್ಳಿನಿಂದ ಹವನ ಮಾಡುತ್ತಾರೆ. ದತ್ತಯಾಗಕ್ಕಾಗಿ ಮಾಡುವ ಜಪದ ಸಂಖ್ಯೆ ನಿಶ್ಚಿತವಾಗಿರುವುದಿಲ್ಲ. ಸ್ಥಳೀಯ ಪುರೋಹಿತರ ಸಲಹೆಯಂತೆ ಜಪ ಮತ್ತು ಹವನವನ್ನು ಮಾಡಲಾಗುತ್ತದೆ.
ಪುರಾಣಗಳ ಪ್ರಕಾರ ಜನ್ಮ ಇತಿಹಾಸ: ಅತ್ರಿ ಋಷಿಗಳ ಪತ್ನಿ ಅನಸೂಯೆ ಮಹಾ ಪತಿವ್ರತೆಯಾಗಿದ್ದಳು. ಅವಳ ಪತಿವ್ರತಾ ಶಕ್ತಿಯಿಂದ ಇಂದ್ರಾದಿ ದೇವತೆಗಳು ಭಯಗೊಂಡು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಬಳಿ ಹೋಗಿ, “ಅವಳ ವರದಿಂದ ಯಾರು ಬೇಕಾದರೂ ದೇವತೆಗಳ ಸ್ಥಾನ ಪಡೆಯಬಹುದು ಅಥವಾ ಕೊಲ್ಲಬಹುದು, ಆದ್ದರಿಂದ ಏನಾದರೂ ಉಪಾಯ ಮಾಡಿ, ಇಲ್ಲದಿದ್ದರೆ ನಾವು ಅವಳ ಸೇವೆ ಮಾಡಬೇಕಾಗುತ್ತದೆ” ಎಂದರು. ಇದನ್ನು ಕೇಳಿ ತ್ರಿಮೂರ್ತಿಗಳು “ಅವಳು ಎಂತಹ ಪತಿವ್ರತೆ ಮತ್ತು ಸತಿ ಎಂಬುದನ್ನು ನಾವು ನೋಡೋಣ” ಎಂದರು.
ಒಮ್ಮೆ ಅತ್ರಿ ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ, ತ್ರಿಮೂರ್ತಿಗಳು ಅತಿಥಿಗಳ ರೂಪದಲ್ಲಿ ಬಂದು ಅನಸೂಯೆಯ ಬಳಿ ಭಿಕ್ಷೆ ಬೇಡಿದರು. ಆಗ ಅನಸೂಯೆ, “ಋಷಿಗಳು ಅನುಷ್ಠಾನಕ್ಕೆ ಹೋಗಿದ್ದಾರೆ, ಅವರು ಬರುವವರೆಗೆ ಕಾಯಿರಿ” ಎಂದಳು. ಆದರೆ ತ್ರಿಮೂರ್ತಿಗಳು, “ಋಷಿಗಳು ಬರಲು ತಡವಾಗಬಹುದು. ನಮಗೆ ತುಂಬಾ ಹಸಿವಾಗಿದೆ, ಕೂಡಲೇ ಅನ್ನ ಕೊಡು, ಇಲ್ಲದಿದ್ದರೆ ನಾವು ಬೇರೆಡೆ ಹೋಗುತ್ತೇವೆ. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನ ನೀಡುತ್ತೀರಿ’ ಎಂದು ನಾವು ಕೇಳಿದ್ದೇವೆ; ಅದಕ್ಕಾಗಿ ಇಚ್ಛಾಭೋಜನ ಮಾಡಲು ನಾವು ಬಂದಿದ್ದೇವೆ” ಎಂದರು. ಆಗ ಅನಸೂಯೆ ಅವರನ್ನು ಸ್ವಾಗತಿಸಿ ಊಟಕ್ಕೆ ಕೂಡಿಸಿದಳು.
ಅವಳು ಊಟ ಬಡಿಸಲು ಬಂದಾಗ ಅವರು, “ನಿನ್ನ ಸುಂದರ ರೂಪ ನೋಡಿ ನಮ್ಮ ಮನಸ್ಸಿನಲ್ಲಿ ಇಚ್ಛೆಯುಂಟಾಗಿದೆ, ನೀನು ವಿವಸ್ತ್ರಳಾಗಿ (ಬೆತ್ತಲೆಯಾಗಿ) ನಮಗೆ ಬಡಿಸಬೇಕು” ಎಂದರು. ಆಗ ‘ಅತಿಥಿಗಳನ್ನು ವಿಮುಖರನ್ನಾಗಿ ಕಳುಹಿಸುವುದು ಅಯೋಗ್ಯ. ನನ್ನ ಮನಸ್ಸು ನಿರ್ಮಲವಾಗಿದೆ, ಮನ್ಮಥನ ಆಟವೇನೂ ನಡೆಯದು. ನನ್ನ ಪತಿಯ ತಪಃಫಲ ನನ್ನನ್ನು ಕಾಪಾಡುತ್ತದೆ’ ಎಂದು ಆಲೋಚಿಸಿ, ಅವಳು ಅತಿಥಿಗಳಿಗೆ “ನಾನು ನಿಮಗೆ ವಿವಸ್ತ್ರಳಾಗಿ ಬಡಿಸುತ್ತೇನೆ, ನೀವು ಆನಂದವಾಗಿ ಭೋಜನ ಮಾಡಿ” ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆ ಮಾಡಿ, ‘ಅತಿಥಿಗಳು ನನ್ನ ಮಕ್ಕಳು’ ಎಂದು ಭಾವಿಸಿ ವಿವಸ್ತ್ರಳಾಗಿ ಬಡಿಸಲು ಬಂದಳು.
ನೋಡುತ್ತಾಳೆ, ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಹಸುಗೂಸುಗಳಿದ್ದವು! ಅವರನ್ನು ಎತ್ತಿಕೊಂಡು ಅವಳು ಎದೆಹಾಲು ಉಣಿಸಿದಳು ಮತ್ತು ಮಕ್ಕಳ ಅಳು ನಿಂತಿತು. ಅಷ್ಟರಲ್ಲಿ ಅತ್ರಿ ಋಷಿಗಳು ಬಂದರು. ಅವಳು ಅವರಿಗೆ ನಡೆದ ವೃತ್ತಾಂತವನ್ನು ಹೇಳಿದಳು. ಅವಳು, “ಸ್ವಾಮಿನ್ ದೇವೇನ ದತ್ತಂ” ಎಂದಳು. ಇದರ ಅರ್ಥ – ‘ಹೇ ಸ್ವಾಮಿ, ದೇವರಿಂದ ನೀಡಲ್ಪಟ್ಟ (ಮಕ್ಕಳು)’. ಇದರಿಂದ ಅತ್ರಿಗಳು ಆ ಮಕ್ಕಳಿಗೆ ‘ದತ್ತ’ ಎಂದು ನಾಮಕರಣ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಮಲಗಿದ್ದವು ಮತ್ತು ಬ್ರಹ್ಮ, ವಿಷ್ಣು, ಮಹೇಶ್ವರರು ಅವರ ಮುಂದೆ ಪ್ರತ್ಯಕ್ಷರಾಗಿ ಪ್ರಸನ್ನರಾಗಿ ‘ವರ ಕೇಳು’ ಎಂದರು. ಅತ್ರಿ ಮತ್ತು ಅನಸೂಯೆ ‘ಈ ಬಾಲಕರು ನಮ್ಮ ಮನೆಯಲ್ಲೇ ಇರಬೇಕು’ ಎಂಬ ವರವನ್ನು ಕೇಳಿದರು. ಮುಂದೆ ಬ್ರಹ್ಮನಿಂದ ಚಂದ್ರ, ವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದುರ್ವಾಸರು ಜನಿಸಿದರು. ಮೂವರಲ್ಲಿ ಚಂದ್ರ ಮತ್ತು ದುರ್ವಾಸರು ತಪಸ್ಸಿಗೆ ಹೋಗಲು ಅನುಮತಿ ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಕ್ಕೆ ಹೋದರು. ಮೂರನೆಯವನಾದ ದತ್ತನು ವಿಷ್ಣುಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.
ದತ್ತ ಅವತಾರ : ದತ್ತನ ಪರಿವಾರದ ಭಾವಾರ್ಥ: ದತ್ತನ ಹಿಂದಿರುವ ಹಸುವು ಭೂಮಿ ಮತ್ತು ನಾಲ್ಕು ನಾಯಿಗಳು ನಾಲ್ಕು ವೇದಗಳ ಸಂಕೇತವಾಗಿವೆ. ಔದುಂಬರ (ಅತ್ತಿ) ಮರವು ದತ್ತನ ಪೂಜನೀಯ ರೂಪವಾಗಿದೆ; ಏಕೆಂದರೆ ಅದರಲ್ಲಿ ದತ್ತತತ್ವವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ದತ್ತಗುರುಗಳು ಭೂಮಿಯನ್ನು ಗುರುವಾಗಿ ಸ್ವೀಕರಿಸಿ, ಭೂಮಿಯಂತೆ ಸಹನೆ ಮತ್ತು ಸಹಿಷ್ಣುತೆಯನ್ನು ಅಳವಡಿಸಿಕೊಳ್ಳಬೇಕೆಂಬ ಪಾಠವನ್ನು ಕಲಿತರು. ಹಾಗೆಯೇ ಅಗ್ನಿಯನ್ನು ಗುರುವಾಗಿ ಸ್ವೀಕರಿಸಿ, ಈ ದೇಹವು ಕ್ಷಣಿಕ ಎಂಬ ಪಾಠವನ್ನು ಅಗ್ನಿಯ ಜ್ವಾಲೆಯಿಂದ ಕಲಿತರು. ಹೀಗೆ ಚರಾಚರಗಳಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಈಶ್ವರನ ಅಸ್ತಿತ್ವವನ್ನು ಕಾಣಲು ದತ್ತಗುರುಗಳು ಇಪ್ಪತ್ನಾಲ್ಕು ಗುರುಗಳನ್ನು ಮಾಡಿಕೊಂಡರು.
‘ಶ್ರೀಪಾದ ಶ್ರೀವಲ್ಲಭ’ರು ದತ್ತನ ಮೊದಲ ಅವತಾರ ಮತ್ತು ‘ಶ್ರೀ ನೃಸಿಂಹ ಸರಸ್ವತಿ’ ಎರಡನೇ ಅವತಾರ. ಹಾಗೆಯೇ ‘ಮಾಣಿಕ್ ಪ್ರಭು’ ಮೂರನೇ ಮತ್ತು ‘ಶ್ರೀ ಸ್ವಾಮಿ ಸಮರ್ಥ ಮಹಾರಾಜ್’ ನಾಲ್ಕನೇ ಅವತಾರವಾಗಿದ್ದಾರೆ. ಇವು ನಾಲ್ಕು ಪೂರ್ಣ ಅವತಾರಗಳಾಗಿದ್ದು, ಅನೇಕ ಅಂಶಾವತಾರಗಳೂ ಇವೆ. ಜೈನಪಂಥೀಯರು ದತ್ತಗುರುಗಳನ್ನು ‘ನೇಮಿನಾಥ’ ಎಂದು ಮತ್ತು ಮುಸ್ಲಿಮರು ‘ಫಕೀರನ ವೇಷ’ದಲ್ಲಿ ಕಾಣುತ್ತಾರೆ.
ದತ್ತರು ಪ್ರತಿದಿನ ತುಂಬಾ ಸಂಚರಿಸುತ್ತಿದ್ದರು. ಅವರು ಸ್ನಾನಕ್ಕಾಗಿ ವಾರಣಾಸಿಗೆ, ಗಂಧ ಲೇಪನಕ್ಕಾಗಿ ಪ್ರಯಾಗಕ್ಕೆ ಹೋಗುತ್ತಿದ್ದರು, ಮಧ್ಯಾಹ್ನದ ಭಿಕ್ಷೆಯನ್ನು ಕೊಲ್ಲಾಪುರದಲ್ಲಿ ಬೇಡುತ್ತಿದ್ದರು ಮತ್ತು ಮಧ್ಯಾಹ್ನದ ಊಟವನ್ನು ಬೀಡ್ ಜಿಲ್ಲೆಯ ಪಾಂಚಾಳೇಶ್ವರದ ಗೋದಾವರಿ ತೀರದಲ್ಲಿ ಮಾಡುತ್ತಿದ್ದರು. ತಾಂಬೂಲಕ್ಕಾಗಿ ಮರಾಠವಾಡದ ರಾಕ್ಷಸಭುವನಕ್ಕೆ ಹೋಗುತ್ತಿದ್ದರು, ಪ್ರವಚನ ಮತ್ತು ಕೀರ್ತನೆ ಕೇಳಲು ಬಿಹಾರದ ನೈಮಿಷಾರಣ್ಯಕ್ಕೆ ತಲುಪುತ್ತಿದ್ದರು. ನಿದ್ರೆಗಾಗಿ ಮಾತ್ರ ಮಾಹೂರಗಢಕ್ಕೆ ಹೋಗುತ್ತಿದ್ದರು ಮತ್ತು ಯೋಗಕ್ಕಾಗಿ ಗಿರ್ನಾರ್ ಪರ್ವತಕ್ಕೆ ಹೋಗುತ್ತಿದ್ದರು.
ದತ್ತಪೂಜೆಯಲ್ಲಿ ಸಗುಣ ಮೂರ್ತಿಗಿಂತ ಪಾದುಕೆ ಮತ್ತು ಔದುಂಬರ ವೃಕ್ಷದ ಪೂಜೆ ಮಾಡುತ್ತಾರೆ. ಹಿಂದೆ ಮೂರ್ತಿಯು ಸಾಮಾನ್ಯವಾಗಿ ಏಕಮುಖಿಯಾಗಿರುತ್ತಿತ್ತು. ಈಗ ತ್ರಿಮುಖಿ ಮೂರ್ತಿ ಹೆಚ್ಚು ಪ್ರಚಲಿತವಿದೆ. ದತ್ತನು ‘ಗುರುದೇವ’ನಾಗಿದ್ದಾನೆ. ದತ್ತಾತ್ರೇಯರನ್ನು ಪರಮಗುರು ಎಂದು ಪರಿಗಣಿಸಲಾಗಿದೆ. ಅವರ ಉಪಾಸನೆಯನ್ನು ಗುರುಸ್ವರೂಪದಲ್ಲೇ ಮಾಡಬೇಕಾಗುತ್ತದೆ. “ಶ್ರೀ ಗುರುದೇವ ದತ್ತ”, “ಶ್ರೀ ಗುರುದತ್ತ” ಎಂದು ಜಯಘೋಷ ಮಾಡುತ್ತಾರೆ. “ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ” ಎಂಬುದು ಅವರ ನಾಮಘೋಷವಾಗಿದೆ.
ದತ್ತಾತ್ರೇಯನ ಭುಜದ ಮೇಲೆ ಒಂದು ಜೋಳಿಗೆ ಇರುತ್ತದೆ. ಅದರ ಭಾವಾರ್ಥ ಹೀಗಿದೆ – ಜೋಳಿಗೆಯು ಜೇನುನೊಣದ ಪ್ರತೀಕವಾಗಿದೆ. ಜೇನುನೊಣಗಳು ಹೇಗೆ ಹೂವಿನಿಂದ ಮಕರಂದ ಸಂಗ್ರಹಿಸಿ ಅದನ್ನು ಒಟ್ಟುಗೂಡಿಸುತ್ತವೆಯೋ, ಹಾಗೆ ದತ್ತನು ಮನೆಮನೆಗೆ ಹೋಗಿ ಜೋಳಿಗೆಯಲ್ಲಿ ಭಿಕ್ಷೆ ಸಂಗ್ರಹಿಸುತ್ತಾನೆ. ಮನೆಮನೆಗೆ ಅಲೆದು ಭಿಕ್ಷೆ ಬೇಡುವುದರಿಂದ ಅಹಂಕಾರ ಬೇಗ ಕಡಿಮೆಯಾಗುತ್ತದೆ; ಆದ್ದರಿಂದ ಜೋಳಿಗೆಯು ಅಹಂಕಾರ ನಾಶದ ಸಂಕೇತವೂ ಆಗಿದೆ.
ದತ್ತ ಜಯಂತಿ ಉತ್ಸವವು ಭಾವಪೂರ್ಣವಾಗಲು ಹೀಗೆ ಮಾಡಿ : ಅ. ಸ್ತ್ರೀಯರು ಒಂಬತ್ತು ಗಜದ ಸೀರೆ ಮತ್ತು ಪುರುಷರು ಜುಬ್ಬಾ-ಪಂಚೆ/ಪೈಜಾಮದಂತಹ ಸಾತ್ವಿಕ ವಸ್ತ್ರಗಳನ್ನು ಧರಿಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಆ. ವಿದ್ಯಾರ್ಥಿಗಳಿಗಾಗಿ ‘ಶ್ರೀದತ್ತಾತ್ರೇಯ ಕವಚ’ ಪಠಣ ಏರ್ಪಡಿಸಬೇಕು ಮತ್ತು ದತ್ತನಾಮಜಪ ಮಾಡಿಸಬೇಕು. ಇ. ಉತ್ಸವದ ಸ್ಥಳದಲ್ಲಿ ಕರ್ಕಶ ಸಂಗೀತ ಹಾಕುವುದು, ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರದಂತಹ ರಜ-ತಮ ಗುಣಗಳನ್ನು ಹೆಚ್ಚಿಸುವ ಕೃತಿಗಳನ್ನು ಮಾಡಬಾರದು. ಈ. ದತ್ತ ಜಯಂತಿಯ ಮೆರವಣಿಗೆಯಲ್ಲಿ ತಾಳ, ಮೃದಂಗದಂತಹ ಸಾತ್ವಿಕ ವಾದ್ಯಗಳನ್ನು ಬಳಸಬೇಕು.
ತಮ್ಮ ವಿಶ್ವಾಸಿ
ಶ್ರೀ. ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ

