ದೆಹಲಿ: ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಗಾಗಿ ಗುರುತಿಸಿಕೊಂಡಿರುವ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕವು ಈ ವರ್ಷದ “ಡಾ. ಬಿ.ಸಿ. ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ”ವನ್ನು ಪ್ರದಾನಿಸಿದೆ. ವೈದ್ಯಕೀಯ ಸೇವೆ, ಸಮುದಾಯ ಪರ ಕಾರ್ಯಚಟುವಟಿಕೆ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ನೀಡಿರುವ ಅನನ್ಯ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇದರ ಗೌರವ ಸದಸ್ಯರಾದ ಇವರ ಈ ಸಾಧನೆಗೆ ಗೌರವ ಸಲ್ಲಿಸಲು ದೆಹಲಿ ತುಳುವ ಮಹಾಸಭೆಯ ಸಂಚಾಲಕರಾದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರ ನೇತೃತ್ವದಲ್ಲಿ ದೆಹಲಿಯ ಸಾನಾದಿಗೆ ರೆಸ್ಟೋರೆಂಟ್‌ನಲ್ಲಿ ಅವರಿಗೆ ವಿಶೇಷ ಗೌರವ ಕಾರ್ಯಕ್ರಮವನ್ನು ಆಯೋಜಿಸಿತು.
ಈ ಸಂದರ್ಭದಲ್ಲಿ ದೆಹಲಿಯ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ ಡಾ. ವೈ. ಅವನೀಂದ್ರನಾಥ್ ರಾವ್, ತುಳುಸಿರಿಯ ಉಪಾಧ್ಯಕ್ಷರಾದ ಮಾಲಿನಿ ಪ್ರಹಲ್ಲಾದ್, ಕಾರ್ಯದರ್ಶಿಗಳಾದ ಅರವಿಂದ್ ಬಿಜೈ, ದೆಹಲಿ ಕನ್ನಡ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಶೆಟ್ಟಿ, ದೆಹಲಿ ಗಣೇಶ ಮಿತ್ರ ಮಂಡಳಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಉಸ್ಮಾನ್ ಅಬ್ದುಲ್ ಶರೀಫ್ ಮತ್ತು ಅನೇಕ ದೆಹಲಿ ನಿವಾಸಿ ತುಳುವರು ಭಾಗವಹಿಸಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ತಮ್ಮ ಅಭಿನಂದನೆಗಳನ್ನು ತಿಳಿಸಿದರು.
ಡಾ. ಕುಲಾಲ್ ಅವರ ನಿರಂತರ ಸಮಾಜಮುಖಿ ಸೇವೆಯನ್ನು ಈ ರಾಷ್ಟ್ರ ಪ್ರಶಸ್ತಿ ಹಾಗೂ ದೆಹಲಿಯ ತುಳುವ ಸಮುದಾಯದಿಂದ ಲಭಿಸಿದ ಗೌರವದ ಮೂಲಕ ಗುರುತಿಸಲಾಗಿದೆ. ಇದು ತುಳುವ ಆ ಸಭೆಗೆ ಗೌರವ ತಂದಿದೆ.