ವಸತಿ ಯೋಜನೆ ಸಹಾಯಧನ ಹೆಚ್ಚಳಕ್ಕೆ ಆಗ್ರಹ

0
1


ಗ್ರಾಮೀಣ ಭಾಗದ ಶೋಷಿತ ವರ್ಗದವರ ವಸತಿ ಹಕ್ಕಿಗಾಗಿ ಹಾಗೂ ಸಹಾಯಧನ ಹೆಚ್ಚಳಕ್ಕೆ ಆಗ್ರಹಿಸಿ ಸಮತಾ ಸೈನಿಕ ದಳದ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಅಲ್ಲಿಂದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದವರೆಗೆ ಪಾದಯಾತ್ರೆ ನಡೆಸಲು ಮುಂದಾದರು. ಆದರೆ ಬ್ರಹ್ಮಗಿರಿಯ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಧರಣಿನಿರತರು, ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

​ಕಾಂಗ್ರೆಸ್ ಮುಖಂಡರಿಂದ ಭರವಸೆ
​ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಲ್ಕೆಬೈಲು ಇತರ ಮುಖಂಡರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಮಾತನಾಡಿ, ಈಗಾಗಲೇ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರುವ ನಂಬಿಕೆ ಇಲ್ಲದ ಕಾರಣ ಈ ಧರಣಿ ಹಮ್ಮಿಕೊಂಡಿದ್ದೆವು. ಈಗ ಜಿಲ್ಲಾ ಕಾಂಗ್ರೆಸ್ ಮುಖಂಡರು 10 ದಿನಗಳ ಗಡುವು ಪಡೆದು ಭರವಸೆ ನೀಡಿರುವುದರಿಂದ ಧರಣಿ ಹಿಂಪಡೆಯುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಗಣೇಶ ಸಾಲಿಯಾನ್, ಮಹಿಳಾ ಘಟಕ ಅಧ್ಯಕ್ಷ ಜ್ಯೋತಿ ಸಿರಿಯಾರ, ಪ್ರಮುಖರಾದ ವಿಘ್ನೇಶ್ ಬ್ರಹ್ಮಾವರ, ಸತೀಶ್, ಗಜೇಂದ್ರ ನಲ್ಲೂರು, ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here