ಉಡುಪಿ: ಆದಿಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಶೆಡ್ ನಿರ್ಮಾಣಕ್ಕಾಗಿ ಖಾಸಗಿ ವ್ಯಕ್ತಿಗಳು ಮರಗಳನ್ನು ಕಡಿದು ಇಂಟರ್ಲಾಕ್ಗಳನ್ನು ಧ್ವಂಸ ಮಾಡಿದ್ದಾರೆ. ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಮರ ತೆರವು ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೃತ್ಯಕ್ಕೆ ಬೆಂಬಲ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆದಿಉಡುಪಿ ಎಪಿಎಂಸಿ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿಜಯ ಕೊಡವೂರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ 2 ವರ್ಷ 8 ತಿಂಗಳಿನಿಂದ ಚುನಾಯಿತ ಪ್ರತಿನಿಧಿಗಳು ಇಲ್ಲ. ಈ ಸಮಯದಲ್ಲಿ ಎಪಿಎಂಸಿಯಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಲೀಸ್ ಕಂ ಸೇಲ್ ನಿಯಮದಡಿಯಲ್ಲಿ ಮೋಸದಿಂದ ಜಾಗ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ವರ್ತಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೀಗ ಎಪಿಎಂಸಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ 50ಕ್ಕೂ ಹೆಚ್ಚು ಮಂದಿ ಮಾರುಕಟ್ಟೆಯಲ್ಲಿರುವ ಮರವನ್ನು ಅಕ್ರಮವಾಗಿ ಕಡಿದು, ಶೆಡ್ಗಳು ಮತ್ತು ಇಂಟರ್ಲಾಕ್ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು. ಘಟನೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಮಧುಕರ ಮುದ್ರಾಡಿ, ವೇದಾವತಿ ಹೆಗ್ಡೆ, ರಾಘವೇಂದ್ರ ಉಪ್ಪರು, ಫಯಾಜ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

