ಉಡುಪಿ: ಮಂಗಳೂರು ವಿವಿ ಕ್ಯಾಂಪಸ್ ಮಂಗಳಗಂಗೋತ್ರಿಯಲ್ಲಿ ಡಿ.3ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಈ ಸಂದರ್ಭದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್ನಲ್ಲಿ 500 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಗಮದ ವತಿಯಿಂದ 26 ಪಂಗಡಗಳ ಅಭಿವೃದ್ಧಿಗೆ ನೀಲನೆ ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್ ಉನ್ನತ ಶಿಕ್ಷಣಕ್ಕೆ ತರಬೇತಿ ಇತ್ಯಾದಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಸ್ವ ಉದ್ಯೋಗ ನಡೆಸಲು ತರಬೇತಿ ಮತ್ತು ಸಾಲ ಸೌಲಭ್ಯ, ಗರಡಿಗಳ ಅರ್ಚಕರಿಗೆ ಮತ್ತು ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರದ ಅರ್ಚಕರು ಮತ್ತು ಸಹಾಯಕರಿಗೆ ಮಾಸಾಶನ ನೀಡುವುದು. 60 ವರ್ಷದ ನಂತರ ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ನಿಗಮಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಬೈರಂಪಳ್ಳಿ, ಅಶೋಕ್ ಕುಮಾರ್ ಬೀಜಾಡಿ, ಮಹೇಶ್ ಅಂಚನ್ ಉಪಸ್ಥಿತರಿದ್ದರು.

