ಉಡುಪಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಹಿಂದೂ ಜನಜಾಗೃತಿ ಸಮಿತಿ ಅಗ್ರಹಿಸಿದೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ
ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರರಾದ ಭೀಮಸೇನ ಕುಲಕರ್ಣಿ ಇವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಮೈಸೂರು ದಸರಾ ಕೇವಲ ಒಂದು ಸಾಂಸ್ಕೃತಿಕ ಹಬ್ಬವಲ್ಲ, ಬದಲಾಗಿ ಕರ್ನಾಟಕದ ಅತ್ಯಂತ ದೊಡ್ಡ ಧಾರ್ಮಿಕ ಮತ್ತು ಪಾರಂಪರಿಕ ಹಬ್ಬ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆ ನಡೆಯುತ್ತಿದ್ದು, 10ನೇ ದಿನ ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿಸಲ್ಪಡುವ ಮುಖ್ಯ ಅತಿಥಿಯು ದೇವಿಯ ಮೇಲೆ ಶ್ರದ್ಧೆ, ಮೂರ್ತಿ ಪೂಜೆಯ ಮೇಲೆ ಭಕ್ತಿ ಹಾಗೂ ನಾಡದೇವಿಯ ಮೇಲೆ ಗೌರವ ಹೊಂದಿರಬೇಕು. ಭಾನು ಮುಷ್ತಾಕ್ ಅವರು ಈ ಹಿಂದೆ ಮಾಡಿದ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಹಿಂದೂಗಳ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿಸುವುದು ಸೂಕ್ತವಲ್ಲ. ಇದು ಹಿಂದೂ ಸಮುದಾಯದ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಕೊಟ್ಯಾಂತರ ಹಿಂದೂ ಭಕ್ತರ ಭಾವನೆಗಳಿಗೆ ಗೌರವ ನೀಡಿ, ಭಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಡಾ.ಮಾರುತಿ ಶಾನುಭಾಗ್, ಜೀವ ವಿಮಾ ನಿಗಮದ ಮುಖ್ಯ ಸಲಹೆಗಾರ ರಮೇಶ ಆಚಾರ್ಯ, ಉಡುಪಿ ಸಂಪರ್ಕ ಝೆರಾಕ್ಸ್ ನ ಶ್ರೀನಿವಾಸ ಗಾಂವಸ್ಕಾರ್, ಸಾಯಿಶ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಮಾಲಕರಾದ ಹರಿಪ್ರಸಾದ್ ನಾಯ್ಕ್ , ಶೇಖರ ಜೋಗಿ, ವಾಸು ಆಚಾರ್ಯ ಉಪಸ್ಥಿತರಿದ್ದರು.