ಹೆಬ್ರಿ :ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ಮೂಲಕ ಮಾಜಿ ಮುಖ್ಯಮಂತ್ರಿಗಳಾದ ಡಾ. ವೀರಪ್ಪ ಮೊಯ್ಲಿಯವರು ಬಡ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಅವರ ಸೇವೆಯನ್ನು ಸಮಾಜ ಬಾಂಧವರಾದ ನಾವುಗಳು ಸದಾ ನೆನಪಿನಲ್ಲಿ ಇಟ್ಟುಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಮಾದರಿಯಾಗಿ ಬಾಳಬೇಕು, ಜೀವನದಲ್ಲಿ ಶಿಸ್ತು, ಸಮಯಬದ್ಧತೆಯನ್ನು ರೂಢಿಸಿಕೊಂಡು ಸಂಘದ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಆಗ ಮಾತ್ರ ಸಂಘ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ದೇವಾಡಿಗ ಸೇವಾ ಸಂಘ (ರಿ.) ಚಿಟ್ಪಾಡಿ ಉಡುಪಿಯ ಅಧ್ಯಕ್ಷರು ಹಾಗೂ ಏಕನಾಥೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ರತ್ನಾಕರ ಜಿ. ಎಸ್ ಹೇಳಿದರು.
ಅವರು ದೇವಾಡಿಗ ಸುಧಾರಕ ಸಂಘ ರಿಜಿಸ್ಟರ್ಡ್ ಹೆಬ್ರಿ ವತಿಯಿಂದ ನಡೆದ 16ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ನಾರಾಯಣಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಪೂಜಾರಿ ಮಾತನಾಡಿ ದೇವಾಡಿಗ ಸಮಾಜ ಬಾಂಧವರು ಸೀಮಿತ ಸಂಖ್ಯೆಯಲ್ಲಿದ್ದರೂ ಅಪಾರ ಪ್ರತಿಭಾವಂತರು ತಮ್ಮಲ್ಲಿ ಇದ್ದಾರೆ, ಹೆಬ್ರಿಯ ದೇವಾಡಿಗ ಸಮಾಜ ಸಂಘವು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾದರಿ ಸಂಘಟನೆಯಾಗಿ ರೂಪುಗೊಳ್ಳುತ್ತಿದೆ, ಸಂಘದ ಬೆಳವಣಿಗೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಅನುದಾನವನ್ನು ಒದಗಿಸಿಕೊಡುವ ಪ್ರಾಮಾಣಿಕ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಮುಳ್ಳುಗುಡ್ಡೆ ಶಿವಪುರ ಕೊರಗಜ್ಜ ದೈವಸ್ಥಾನದ ಪೀಠಾಧಿಕಾರಿ ಪುನೀತ್ ಮಾತನಾಡಿ ದೇವರ ಸೇವೆಯಲ್ಲಿ ಯಾವಾಗಲೂ ತೊಡಗಿಸಿಕೊಳ್ಳುವ ದೇವಾಡಿಗ ಸಮಾಜ ಬಾಂಧವರ ಕಾರ್ಯವನ್ನು ಕಂಡು ಖುಷಿಯಾಗುತ್ತಿದೆ, ಮಕ್ಕಳ ಪ್ರತಿಭೆಯನ್ನು ಹಾಗೂ ಸಾಧಕರನ್ನು ಗುರುತಿಸುವ ಕಾರ್ಯ ನಿರಂತರ ಮುಂದುವರಿಯಲಿ, ಸೇವಾ ಮನೋಭಾವನೆಯಿಂದ ಸಮಾಜದ ಹಿತವನ್ನು ಕಾಪಾಡಲು ಸಾಧ್ಯ ಎಂದು ಹೇಳಿದರು, ದೇವಾಡಿಗ ಸುಧಾರಕ ಸಂಘ (ರಿ.)ಹೆಬ್ರಿ ಇದರ ಅಧ್ಯಕ್ಷರಾದ ಶಂಕರ ದೇವಾಡಿಗ ಅಧ್ಯಕ್ಷತೆ ವಹಿಸಿ ಸಂಘದ ಚಟುವಟಿಕೆಗಳಿಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಶೀನ ಸೇರಿಗಾರ, ಸ್ಥಾಪಕ ಅಧ್ಯಕ್ಷರಾದ ಸದಾನಂದ ಮೊಯ್ಲಿ, ಉಪಾಧ್ಯಕ್ಷರಾದ ಸುಧಾಕರ್ ಸೇರಿಗಾರ, ಪ್ರಧಾನ ಕಾರ್ಯದರ್ಶಿಗಳಾದ ಶಂಭು ಸೇರಿಗಾರ,ಮಹಿಳಾ ಘಟಕದ ಅಧ್ಯಕ್ಷರಾದ ಪ್ರಮೀಳಾ ರಘುರಾಮ, ಕೋಶಾಧಿಕಾರಿಗಳಾದ ಆನಂದ ಸೇರಿಗಾರ ಉಪಸ್ಥಿತರಿದ್ದರು. ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ಹೂವು ನೀಡಿ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಹೆಬ್ರಿ ಇದರ ಅಧ್ಯಕ್ಷರನ್ನು ಹಾಗೂ ಸರ್ವಸದಸ್ಯರುಗಳನ್ನು, ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕ್ ಪಡೆದ ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ವಂಶಿಕಾ ದೇವಾಡಿಗ ಉಪ್ಪಳ ಮುದ್ರಾಡಿ ಮತ್ತು ನಾರಾಯಣಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು,ವಿದ್ಯಾನಿಧಿ ಹಾಗೂ ಬಹುಮಾನದ ಪ್ರಾಯೋಜಕರನ್ನು ಗೌರವಿಸಲಾಯಿತು,ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಪಟ್ಟಿಯನ್ನು ರಂಜಿತಾ ವಾಚಿಸಿದರು, ಸಂಘದ ವಾರ್ಷಿಕ ವರದಿಯನ್ನು ರಾಘವೇಂದ್ರ ಚಾರ ಮಂಡಿಸಿದರು, ಉದಯ ಸೇರಿಗಾರ ಶಿವಪುರ ಸ್ವಾಗತಿಸಿದರು,ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಸಂಘದ ಸರ್ವ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

