ಧರ್ಮಸ್ಥಳ : ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಡಾ. ಎನ್. ವಿನಯ ಹೆಗ್ಡೆ ಅವರ ನಿಧನ ಸುದ್ದಿ ತಿಳಿದು ಅತ್ಯಂತ ವಿಷಾದವಾಯಿತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಡಾ. ಎನ್. ವಿನಯ ಹೆಗ್ಡೆ ಅವರು ಶಿಕ್ಷಣ ತಜ್ಞರಾಗಿ, ಖ್ಯಾತ ಉದ್ಯಮಿಯಾಗಿ, ಕ್ರೀಡಾಪ್ರೇಮಿಯಾಗಿ, ಸಮಾಜಸೇವಕರಾಗಿ ಹಾಗೂ ದಕ್ಷ ಆಡಳಿತದಾರರಾಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ಅವರು ತಮ್ಮ ದಕ್ಷ ನಾಯಕತ್ವದ ಮೂಲಕ ತಾವು ಬೆಳೆಯುವುದರೊಂದಿಗೆ ಇತರರಿಗೂ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡಿದವರು ಎಂದು ಹೆಗ್ಗಡೆ ಅವರು ಸ್ಮರಿಸಿದರು.
ಅನೇಕ ಸಮಾರಂಭಗಳಲ್ಲಿ ನಾವು ಜೊತೆಯಾಗಿ ವೇದಿಕೆಯನ್ನು ಹಂಚಿಕೊಂಡಿದ್ದೇವೆ. ನಮ್ಮ ಕ್ಷೇತ್ರದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ಸ್ನೇಹಜೀವಿಯಾಗಿ ಹಾಗೂ ಆದರ್ಶ ಸಮಾಜಸೇವಕರಾಗಿ ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅವರ ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ನಿಧನದಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ ಮತ್ತು ತಾಳ್ಮೆಯನ್ನು ಶ್ರೀ ಮಂಜುನಾಥ ಸ್ವಾಮಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
