ಸ್ಲಂ ಏರಿಯಾಗಳ ಮಧ್ಯದಿಂದ ಮಹಿಳಾ ಅಭ್ಯರ್ಥಿಯೊಬ್ಬರು ಇಪ್ಪತ್ತೈದರಿಂದ ಮೂವತ್ತು ಜನರ ಕಾಲ್ನಡಿಗೆಯಲ್ಲಿ ಪ್ರಚಾರ ಮಾಡುತ್ತಿದ್ದರೆ ಒಂದು ಕಿ.ಮಿ. ಅಂತರದಲ್ಲಿ ಮೂರು ರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ಚಿತ್ರೀಕರಿಸಿ ಹೊರಟರು. ಜನರ ಮಧ್ಯೆ ಈ ಅಭ್ಯರ್ಥಿ ಪಡೆದುಕೊಂಡ ಖ್ಯಾತಿಯು ಎಲ್ಲಾ ಮಾಧ್ಯಮಗಳು ಜಾಹೀರಾತು ರಹಿತವಾಗಿ ಸುದ್ದಿ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅವರು ಬಿಹಾರದ ದಿಘಾ ವಿಧಾನಸಭಾ ಕ್ಷೇತ್ರದ 34 ವರ್ಷ ವಯಸ್ಸಿನ ದಿವ್ಯಾ ಗೌತಮ್ ಎಂಬ ಮಹಾಘಟಬಂಧನ್ ಅಭ್ಯರ್ಥಿ.
ಬಾಲಿವುಡ್ ನಟ ದಿ. ಸುಶಾಂತ್ ಸಿಂಗ್ ತಂಗಿಯಾಗಿರುವ ದಿವ್ಯಾ ಗೌತಮ್ ಸಿಪಿಐಎಂಎಲ್ (ಲಿಬರೇಷನ್) ನಾಯಕಿಯಾಗಿದ್ದಾರೆ. ಸಿಪಿಐಎಂಎಲ್ ಬಿಹಾರದ 2020-25ರ ವಿಧಾನಸಭೆಯಲ್ಲಿ 12 ಶಾಸಕರ ಬಲವನ್ನು ಹೊಂದಿದೆ. ರಾಜ್ಯ ರಾಜಕೀಯದಲ್ಲಿ 12 ಶಾಸಕರ ಬಲ ಇರುವ ಸೈದ್ಧಾಂತಿಕ ಪಕ್ಷವೊಂದು ಕಡಿಮೆ ಪ್ರಭಾವಶಾಲಿಯಲ್ಲ. ಆದರೂ ಅದರ ಅಭ್ಯರ್ಥಿ ದಿವ್ಯಾ ಗೌತಮ್ ಅವರು ಬಡವರ ಮನೆಗಳಿಗೆ ಕಾಲ್ನಡಿಗೆಯಲ್ಲಿ ತೆರಳುವುದನ್ನೇ ಚುನಾವಣಾ ಪ್ರಚಾರದ ಮಾದರಿಯನ್ನಾಗಿಸಿಕೊಂಡಿದ್ದಾರೆ. ಉಳಿದ ಅಭ್ಯರ್ಥಿಗಳಂತೆ ದಿಘಾದಲ್ಲಿ ದಿವ್ಯಾ ಗೌತಮ್ ಹಿಂದೆ ಮುಂದೆ ಕಾರುಗಳ ಸರತಿಯಿಲ್ಲ. ಕಾಲ್ನಡಿಗೆಯಲ್ಲೇ ಮತ ಕೇಳುವ ಅಭ್ಯರ್ಥಿ, ಅವರನ್ನು ವಿದ್ಯಾರ್ಥಿ, ರೈತ, ರಂಗ ಚಳವಳಿಯ ಕಾರ್ಯಕರ್ತರು, ವಯಸ್ಸಾದ ನಾಯಕರು ಬ್ಯಾಟರಿ ರಿಕ್ಷಾ, ಬೈಕು, ಸೈಕಲ್ಲುಗಳ ಮೂಲಕ ಹಿಂಬಾಲಿಸುತ್ತಿದ್ದರು. ಇಡೀ ಕ್ಷೇತ್ರದಾದ್ಯಂತ ಎಲ್ಲೂ ದೊಡ್ಡ ಸಮಾವೇಶಗಳನ್ನು ದಿವ್ಯಾ ಗೌತಮ್ ನಡೆಸುತ್ತಿಲ್ಲ. ಜನರಿಗೆ ತೊಂದರೆ ಕೊಡುವ, ಜನರನ್ನು ಭ್ರಷ್ಟರನ್ನಾಗಿಸುವ ಸಮಾವೇಶಗಳ ಬದಲು ನೇರ ಜನರನ್ನು ಭೇಟಿಯಾಗುವ ಗುರಿಯೊಂದಿಗೆ ಮನೆಮನೆಗೆ ಭೇಟಿ ಮತ್ತು ಸಣ್ಣ ಸಣ್ಣ ಸಭೆಗಳಿಗಷ್ಟೇ ಪ್ರಚಾರವನ್ನು ಸೀಮಿತಗೊಳಿಸಿದ್ದಾರೆ.
ನಾವು ದಿವ್ಯಾ ಗೌತಮ್ ಅವರ ಚುನಾವಣಾ ಪ್ರಚಾರ ಸಭೆಯನ್ನು ಜಗದೇವ್ ಪಥ್ ನಿಂದ ಖಲೀಲ್ ಪುರ್ ಆಸುಪಾಸಿನವರೆಗೆ ಹಿಂಬಾಲಿಸಿದೆವು. ಬಿಹಾರ ಚುನಾವಣೆಯ ಅಲಿಖಿತ ಸಂಪ್ರದಾಯವನ್ನೇ ದಿವ್ಯಾ ಗೌತಮ್ ಮುರಿಯುತ್ತಾ ಸಾಗುತ್ತಿದ್ದರು. ಜಗದೇವ್ ಪಥ್‌ನ ಸ್ಲಂಗಳಲ್ಲಿ ಓಡಾಡಿದ ದಿವ್ಯಾ ಗೌತಮ್ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
2015 ರಿಂದ 2025 ರವರೆಗೆ ಎರಡು ಅವಧಿಯ ಶಾಸಕರಾಗಿರುವ ಬಿಜೆಪಿಯ ಸಂಜೀವ್ ಚೌರಾಸಿಯಾ ಎದುರು ‘ಇಂಡಿಯಾ’ ಪರವಾಗಿ ಸಿಪಿಐ (ಒಐ-ಲಿಬರೇಷನ್‌ನ ದಿವ್ಯಾ ಗೌತಮ್ ಮಾತ್ರವಲ್ಲದೇ, ಜನ ಸುರಾಜ್ ಪಕ್ಷದ ರಿತೇಶ್ ರಂಜನ್ ಅಲಿಯಾಸ್ ಬಿಟ್ಟು ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಭ್ಯರ್ಥಿಗಿಂತ ಪಕ್ಷದ ಪ್ರಾಧಾನ್ಯತೆಯೇ ಇಲ್ಲಿ ಹೆಚ್ಚು ಸ್ಥಳೀಯ ವ್ಯಾಪಾರ ವರ್ಗದ ಸಂಪೂರ್ಣ ಬೆಂಬಲ ಬಿಜೆಪಿ ಪರವಾಗಿದೆ.
ಶಾಸಕರಾಗಿರುವ ಸಂಜೀವ್ ಚೌರಾಸಿಯಾ ಅವರು ದಿಘಾ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಪ್ರತೀ ಗಲ್ಲಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಬಾಗಿಲುಗಳೇ ಇಲ್ಲದ ಗುಡಿಸಲುಗಳು, ನಗರದೊಳಗಡೆಯೂ ಶೌಚಾಲಯವೇ ಇಲ್ಲದ ಸಾವಿರಾರು ಮನೆಗಳು, ರಸ್ತೆಯಲ್ಲೇ ಹರಿಯುವ ಡ್ರೈನೇಜ್ ನೀರು, ಕನಿಷ್ಠ ವಸತಿಯೇ ಇಲ್ಲದ ಮನೆಗಳು.. ಹೀಗೆ ಅಭಿವೃದ್ಧಿಯನ್ನೇ ಕಾಣದ ದಿಘಾ ವಿಧಾನಸಭಾ ಕ್ಷೇತ್ರವನ್ನು ಬೆಂಗಳೂರಿನ ಯಾವುದಾದರೊಂದು ವಿಧಾನಸಭಾ ಕ್ಷೇತ್ರದ ಜೊತೆ ಹೋಲಿಸಿ ನೋಡಬೇಕೆಂದರೂ ಕನಿಷ್ಠ ಮೂವತ್ತು ವರ್ಷ ಬೇಕಾಗಬಹುದೇನೋ? ಅಂತಹದ್ದೊಂದು ವಿಧಾನಸಭಾ ಕ್ಷೇತ್ರವನ್ನು ಬದಲಿಸುವ ಪಣವನ್ನು ತೊಟ್ಟು ದಿವ್ಯಾ ಗೌತಮ್ ಮಹಾಘಟಬಂಧನ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಆದರೆ ಇಲ್ಲಿನ ಮಾಧ್ಯಮಗಳಿಗೆ ದಿಘಾ ಕ್ಷೇತ್ರದ ಜನರ ಸಮಸ್ಯೆಗಳು ಅಗತ್ಯವೇ ಇಲ್ಲ. ಇಲ್ಲಿರುವ ಸ್ಲಂಗಳು, ಬಡತನ ರೇಖೆಗಿಂತಲೂ ಕೆಳಗಿರುವ ಜನರ ಸಂಖ್ಯೆಯೇ ಅತಿಯಾಗಿರುವ ಕ್ಷೇತ್ರದ ಬಗ್ಗೆ ಮಾತನಾಡದೆ, ನಟ ಸುಶಾಂತ್ ಸಿಂಗ್ ಸಹೋದರಿ ದಿವ್ಯಾ ಗೌತಮ್ ಸ್ಪರ್ಧಿಸುತ್ತಿರುವ ಸೆಲೆಬ್ರಿಟಿ ಕ್ಷೇತ್ರ ಎಂದೇ ಪರಿಗಣಿಸಿ ಪ್ರಚಾರ ನೀಡುತ್ತಿವೆ. ನಾವು ದಿವ್ಯಾ ಗೌತಮ್ ಅವರ ಜೊತೆ ಇದ್ದಾಗಲೂ ಒಂದು ರಾಷ್ಟ್ರೀಯ ಮಾಧ್ಯಮದ ವರದಿಗಾರ್ತಿಯೊಬ್ಬರು ಕ್ಯಾಮರಾದ ಜೊತೆ ಬಂದು ದಿವ್ಯಾ ಗೌತಮ್ ಅವರನ್ನು ಜನರ ಮಧ್ಯೆ ಸಂದರ್ಶನ (ಚಿಟ್ ಚ್ಯಾಟ್) ಮಾಡಿದರು. ಬಾಲಿವುಡ್‌ನ ಖ್ಯಾತ ನಟನಾಗಿದ್ದ ಸುಶಾಂತ್ ಸಿಂಗ್ ಅವರ ಸಹೋದರಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಈಗ ಸುಶಾಂತ್ ಸಿಂಗ್ ಇದ್ದಿದ್ದರೆ ಏನು ಹೇಳುತ್ತಿದ್ದರು?
ದಿವ್ಯಾ ಗೌತಮ್ ಅವರು ಈ ಪ್ರಶ್ನೆಗೆ ಯಾವ ಭಾವನೆಯನ್ನೂ ವ್ಯಕ್ತಪಡಿಸದೇ ದಿಘಾ ಕ್ಷೇತ್ರದ ಜನರಿಗೆ ನೀರು, ಶೌಚಾಲಯ, ಕನಿಷ್ಠ ಮನೆಗಳೂ ಇಲ್ಲದ ಪರಿಸ್ಥಿತಿ ಇದೆ. ನೀವು ಇಡೀ ಕ್ಷೇತ್ರ ಸುತ್ತಿ ನೋಡಿದರೆ ಆಡಳಿತಗಾರರು ಜನರ ಬಗ್ಗೆ ಹೊಂದಿರುವ ಅಸಡ್ಡೆ ಮತ್ತು ಜನರು ಆಡಳಿತಗಾರರ ಬಗ್ಗೆ ಹೊಂದಿರುವ ದೋರಣೆ ಅರ್ಥವಾಗುತ್ತದೆ ಎಂದು ಮಾತು ಪ್ರಾರಂಭಿಸಿದರು. ಎಲ್ಲೂ ಕೂಡಾ ದಿವ್ಯಾ ಗೌತಮ್ ಅವರು ನಟ ಸುಶಾಂತ್ ಸಿಂಗ್ ಹೆಸರನ್ನು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ದಿಘಾ ಕ್ಷೇತ್ರವನ್ನು ನಟ ಸುಶಾಂತ್ ಸಿಂಗ್ ಹೆಸರಲ್ಲಿ ಸೆಲೆಬ್ರಿಟಿ ಕ್ಷೇತ್ರ ಎಂದು ಮಾಧ್ಯಮಗಳೇ ಹೇಳುತ್ತುದ್ದರೂ ಅದರ ಲಾಭವನ್ನು ದಿವ್ಯಾ ಗೌತಮ್ ಪಡೆಯುತ್ತಿಲ್ಲ. ಬದಲಾಗಿ, ಜನರ ಸಮಸ್ಯೆಗಳೇ ಚುನಾವಣೆಯ ಪ್ರಮುಖ ವಿಷಯವಾಗಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿದೆ.
ದಿಘಾ ಕ್ಷೇತ್ರವು ಗಂಗಾನದಿಯ ತಟದಲ್ಲಿದೆ. ಇಲ್ಲಿ ಅಟಲ್ ಮತ್ತು ಜೆಪಿ ಗಂಗಾ ಪಾಥ್ಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೂಲಕ ಸಂಪರ್ಕ ಮತ್ತು ಟ್ರಾಫಿಕ್ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಒಳ ರಸ್ತೆಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಗಂಗಾಪಥ್ ಎನ್ನುವುದು ಈಗ ಪ್ರವಾಸಿತಾಣವಾಗಿದ್ದರೂ ಸುಸಜ್ಜಿತ ಶೌಚಾಲಯ, ಸ್ವಚ್ಛತೆಯ ಕೊರತೆಯಿಂದಾಗಿ ಪ್ರವಾಸಿ ತಾಣವಾಗಿ ಗಮನ ಸೆಳೆದಿಲ್ಲ. ಸರಕಾರಿ ಶಾಲೆಯ ಸ್ಥಿತಿಯಂತೂ ಹೀನಾಯವಾಗಿದೆ.
ಜಗದೀವ್ ಪಥ್‌ನ ಸ್ಲಂ ನಿವಾಸಿಯೊಬ್ಬರನ್ನು ನಾವು ಮಾತನಾಡಿಸಿದಾಗ ಶಾಸಕ ಚೌರಾಸಿಯಾ ಅವರನ್ನು ನಾವು ಈವರೆಗೂ ನೋಡಲ್ಲ. ಸ್ಲಂಗಳು ಅವರು ಗಮನ ಹರಿಸಿಲ್ಲ. ನಮ್ಮ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣವಿಲ್ಲ. ಹಾಗಾಗಿ ಈ ಏರಿಯಾಗಳು ಸುಧಾರಣೆಯಾಗಲು ಇನ್ನೂ ಎಷ್ಟು ದಶಕಗಳು ಬೇಕಾಗಬಹುದೋ ಗೊತ್ತಿಲ್ಲ ಎಂದರು.
ಕಳ್ಳತನ ಎನ್ನುವುದು ದಿಘಾದ ಅತ್ಯಂತ ದೊಡ್ಡ ಸಮಸ್ಯೆ ಪ್ರತೀ ಎರಡು ಮನೆಗಳಲ್ಲಿ ಒಂದು ಮನೆಯಾದರೂ ಕಳ್ಳತನಕ್ಕೆ ಒಳಗಾಗಿದೆಯಂತೆ. ನಿರುದ್ಯೋಗ ಮತ್ತು ಅನಕ್ಷರತೆಯೇ ಈ ಕಳ್ಳತನ ಕೃತ್ಯಕ್ಕೆ ಕಾರಣ ಎಂದು ಇಂಡಿಯಾ ಮಹಾಘಟಬಂಧನ್ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ಇಂಡಿಯಾ ಮಹಾಘಟಬಂಧನ್ ಅಭ್ಯರ್ಥಿಯು ದಿಘಾ ಅಸೆಂಬ್ಲಿ ಚುನಾವಣೆಯಲ್ಲಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಹಣಕಾಸಿನದ್ದು. ‘ಇಂಡಿಯಾ’ದಿಂದ ಸ್ಪರ್ಧಿಸುತ್ತಿರುವ ಸಿಪಿಐಎಂಎಲ್(ಲಿಬರೇಷನ್‌ಗೆ ಎಲ್ಲೆಡೆಯಲ್ಲಿಯೂ ಆರ್ ಜೆಡಿಯು ಕಾರ್ಯಕರ್ತರ ಬೆಂಬಲ ನೀಡಿದೆ. ಆದರೆ ಮಹಿಳಾ ಸ್ಪರ್ಧಿಗಳನ್ನು ನಿರ್ಲಕ್ಷಿಸಿದಂತಿದೆ. ಆದರೆ ದಿವ್ಯ ಗೌತಮ್ ಪರವಾಗಿ ದೇಶದೆಲ್ಲೆಡೆಯ ಸಿಪಿಐಎಂಎಲ್ ಕಾರ್ಯಕರ್ತರು, ಜೆಎನ್ ಯು ಹಳೆ ವಿದ್ಯಾರ್ಥಿಗಳು, ದೆಹಲಿ ರೈತ ಚಳವಳಿ ಮುನ್ನಡೆಸಿದ ಮುಖಂಡರು ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಸಿಪಿಐಎಂಎಲ್ ಮುಖಂಡರಾದ ಹಿರಿಯ ವಕೀಲ ಕ್ಲಿಪ್ಟನ್ ರೆಸಾರಿಯೋ ಅವರು ದಿವ್ಯಾ ಗೌತಮ್ ಅವರ ಪ್ರಚಾರದ ಉಸ್ತುವಾರಿ ಮತ್ತು ಹಣಕಾಸು ಹೊಂದಿಕೆಯ ಜವಾಬ್ದಾರಿ ಹೊಂದಿದ್ದಾರೆ. ಜನರಿಂದ ಹಣ ಸಂಗ್ರಹಿಸಿ ಚುನಾವಣೆಯನ್ನು ಮುನ್ನಡೆಸುತ್ತಿದ್ದಾರೆ.
ದಿಘಾ ವಿಧಾನಸಭಾ ಕ್ಷೇತ್ರವು ಇಡೀ ಬಿಹಾರದ ಸಂಕೇತದಂತಿದೆ. ಮೂಲಭೂತ ಸೌಕರ್ಯದ ಕೊರತೆ, ಶಿಕ್ಷಣ, ಉದ್ಯೋಗ, ಘನತೆಯ ಬದುಕುಗಳಿಂದ ವಂಚಿತರಾದ ಜನತೆ, ವಿಪರೀತಗೊಂಡಿರುವ ಕ್ರೈಂರೇಟ್ ಇಡೀ ಬಿಹಾರವನ್ನು ಪ್ರತಿನಿಧಿಸುತ್ತದೆ. ವ್ಯಾಪಾರಿ ವರ್ಗ, ಪ್ಯೂಡಲ್ ಗಳ ಎದುರು ಜನಸಾಮಾನ್ಯರ ಅಭ್ಯರ್ಥಿಯಾಗಿ ದಿವ್ಯಾ ಗೌತಮ್ ಸ್ಪರ್ಧೆ ನಡೆಸುತ್ತಿದ್ದಾರೆ. ಗೆಲುವು-ಸೋಲಿಗಿಂತಲೂ ದಿವ್ಯಾ ಗೌತಮ್ ಸ್ಪರ್ಧೆ ಸೆಲೆಬ್ರಿಟಿ ಕಾರಣದಿಂದ ಬಿಹಾರದಾದ್ಯಂತ ಚರ್ಚೆಯಲ್ಲಿದೆ. ಈ ಚರ್ಚೆ ಜನರ ವಿಷಯಗಳತ್ತ ತಿರುಗಿದರೆ ದಿವ್ಯಾ ಗೌತಮ್ ಗೆಲುವು ಕಷ್ಟವೇನಲ್ಲ
ವರದಿ: ನವೀನ್ ಸೂರಿಂಜೆ

