ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾ. ಘಟಕ – ವಿ ಜಿ ಎಸ್ ಎನ್ ಭಟ್ ಕೃತಿ ಲೋಕಾರ್ಪಣೆ

0
27

ದ ಕ ಜಿಲ್ಲಾ ಕ ಸಾ ಪ , ಮಂಗಳೂರು ತಾ. ಘಟಕದಿಂದ ನಿವೃತ್ತ ಶಿಕ್ಷಕ , ಕವಿ ವಿ ಜಿ ಎಸ್ ಎನ್ ಭಟ್ ಅವರ ಗುಬ್ಬಚ್ಚಿ ಗೂಡು ಚುಟುಕು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಲಾ ಕಾಲೇಜಿನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃತಿ ಲೋಕಾರ್ಪಣೆಗೊಳಿಸಿದ ಹೆಸರಾಂತ ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ , ಹೇಗೆ ವೈದ್ಯರ ಚುಚ್ಚು ಮದ್ದು ರೋಗಗಳನ್ನು ವಾಸಿ ಮಾಡುವುದೋ ಹಾಗೆಯೇ ಸಮಾಜದಲ್ಲಿರುವ ಕುಂದು ಕೊರತೆಗಳೆಂಬ ರೋಗಗಳಿಗೆ ಕವಿಗಳ ಚುಟುಕುಗಳು ಚುಚ್ಚು ಮದ್ದಿನಂತೆ ಕೆಲಸ ಮಾಡುತ್ತವೆ , ಅವು ಸಮಾಜವನ್ನು ತಿದ್ದುವ , ಎಚ್ಚರಿಸುವ , ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತವೆ ಎಂದರು. ಕೃತಿಕಾರರು ತಮ್ಮ ಸುತ್ತ ಮುತ್ತಲಿನ ವಿಷಯಗಳನ್ನೇ ಚುಟುಕಾಗಿಸಿ ಇಂತಹ ಕಾರ್ಯವನ್ನು ಮಾಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಮಾತನಾಡಿ ನಿವೃತ್ತ ಜೀವನದಲ್ಲಿ ಸಾಹಿತ್ಯದ ಪ್ರವೃತ್ತಿ ಸಂತಸಮಯ ಬದುಕಿಗೆ ದಾರಿ ಮತ್ತು ಅದನ್ನು ಕೃತಿಕಾರರು ಪಾಲಿಸುತ್ತಿದ್ದಾರೆ , ಇನ್ನೂ ನಾವು ಅವರಿಂದ ನಿರೀಕ್ಷಿಸಬಹುದು ಎಂದರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ಗೌರವ ಸಮ್ಮಾನ ಸ್ವೀಕರಿಸಿದ ಕೃತಿಕಾರ ವಿ ಜಿ ಎಸ್ ಎನ್ ಭಟ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಕೃತಿ ಬಿಡುಗಡೆ ಕಾರ್ಯಕ್ರಮವು ಸುಂದರವಾಗಿ ಮೂಡಿಬರಲು ಕಾರಣವಾದ ಮಂಗಳೂರು ಕ ಸಾ ಪ ಘಟಕಕ್ಕೆ ಕೃತಜ್ಞತೆ ಸಲ್ಲಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಕೃತಿ ಪರಿಚಯ ಮಾಡಿದರು. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ರತ್ನಾವತಿ ಜೆ ಬೈಕಾಡಿ ಪ್ರಾರ್ಥಿಸಿದರು. ಸಾಹಿತಿ ರಘು ಇಡ್ಕಿದು ಧನ್ಯವಾದವಿತ್ತರು. ಜಿಲ್ಲಾ ಸಮಿತಿಯ ಅರುಣಾ ನಾಗರಾಜ್ , ಸನತ್ ಕುಮಾರ್ ಜೈನ್ , ಕೃತಿಕಾರರ ಪತ್ನಿ ಸೀತಾಲಕ್ಷ್ಮೀ , ಕುಟುಂಬ ಬಂಧು ಬಳಗ , ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಡಾ. ಮೀನಾಕ್ಷಿ ರಾಮಚಂದ್ರ ನಿರೂಪಿಸಿದರು.

LEAVE A REPLY

Please enter your comment!
Please enter your name here