ಮಂಗಳೂರು: ನಗರದ V4 ನ್ಯೂಸ್ ಚ್ಯಾನೆಲ್ ತನ್ನ 20ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿ ಸಂಭ್ರಮವನ್ನು ವೈವಿಧ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಿಸಲಿದೆ ಎಂದು ವಾಹಿನಿಯ ನಿರ್ದೇಶಕ ಲಕ್ಷ್ಮಣ ಕುಂದರ್ ತಿಳಿಸಿದ್ದಾರೆ. ಇಂದಿನಿಂದಲೇ ಅದರ ಪ್ರಸಾರ ಕಾರ್ಯ ಆರಂಭವಾಗುವುದೆಂದು ಅವರು ಪ್ರಕಟಿಸಿದರು.
ತುಳುನಾಡ ಬಲಿಯೇಂದ್ರೆ:
ದೀಪಾವಳಿ ಆಚರಣೆಯ ಹಿನ್ನೆಲೆಯಲ್ಲಿ ಬರುವ ಬಲಿಯೇಂದ್ರನ ಪೌರಾಣಿಕ ಕಥೆಯನ್ನು ತುಳು ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆಯ ಮೂಲಕ ಜಿಲ್ಲೆಯ ಪ್ರಸಿದ್ಧ ಕಲಾವಿದರು ಕೇಬಲ್ ಜಾಲದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಯಕ್ಷಗಾನ ರಂಗದ ಖ್ಯಾತ ಅರ್ಥಧಾರಿಗಳಾದ ಡಾ. ಎಂ.ಪ್ರಭಾಕರ ಜೋಶಿ (ಶುಕ್ರಾಚಾರ್ಯ), ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಬಲೀಂದ್ರ), ಡಾ.ತಾರಾನಾಥ ವರ್ಕಾಡಿ (ವಾಮನ), ಸರಪಾಡಿ ಅಶೋಕ ಶೆಟ್ಟಿ (ಕಲಿಪುರುಷ) ಮತ್ತು ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ವಿಂಧ್ಯಾವಳಿ) ವಿವಿಧ ಪಾತ್ರಗಳನ್ನು ನಿರ್ವಹಿಸುವರು. ಭಾಗವತ, ಪ್ರಸಂಗಕರ್ತ ಹರೀಶ ಶೆಟ್ಟಿ ಸೂಡಾ ಅವರ ಹಾಡುಗಾರಿಕೆಗೆ ಹಿಮ್ಮೇಳದಲ್ಲಿ ಸ್ಕಂದ ಕೊನ್ನಾರ್ ಮತ್ತು ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ ಚಂಡೆ – ಮದ್ದಳೆ ನುಡಿಸುವರು.
ಈ ಕಾರ್ಯಕ್ರಮವು ಅಕ್ಟೋಬರ್ 20ರಂದು ಸೋಮವಾರ ಬೆಳಿಗ್ಗೆ ಗಂಟೆ 10ರಿಂದ V4 ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ದೀಪಾವಳಿ ಕಾವ್ಯಾಂಜಲಿ:
ಬೆಳಕಿನ ಹಬ್ಬ ದೀಪಾವಳಿಯ ಸೂಕ್ತ ಸಂದೇಶಗಳನ್ನೊಳಗೊಂಡ ‘ದೀಪಾವಳಿ ಕಾವ್ಯಾಂಜಲಿ’ ಎಂಬ ತುಳು – ಕನ್ನಡ ಕವಿತೆಗಳ ಕಾವ್ಯ ಗುಚ್ಛವನ್ನು ಪ್ರಸಾರಕ್ಕೆ ಅಳವಡಿಸಲಾಗಿದೆ. ಕವಿ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಪರಿಕಲ್ಪನೆ ಮತ್ತು ನಿರೂಪಣೆಯಲ್ಲಿ ‘ಬೆಳಕಿನ ಹಬ್ಬಕೆ ಕವಿತೆಯ ಕಾಣ್ಕೆ’ ಎಂಬ ಉಪ ಶೀರ್ಷಿಕೆಯೊಂದಿಗೆ ಮೂಡಿಬರುವ ಈ ದೀಪಾವಳಿ ಕವಿಗೋಷ್ಠಿಯಲ್ಲಿ ಜಿಲ್ಲೆಯ 16 ಮಂದಿ ಹೆಸರಾಂತ ಕವಿಗಳು ಭಾಗವಹಿಸುವರು.
ಡಾ.ಎಸ್.ಎಂ.ಶಿವಪ್ರಕಾಶ್, ಮಹೇಂದ್ರ ನಾಥ್ ಸಾಲೆತ್ತೂರು, ಯೋಗೀಶ್ ಕಾಂಚನ್ ಬೈಕಂಪಾಡಿ, ರಘು ಇಡ್ಕಿದು, ಕೆ.ಎಸ್. ಮಂಜುನಾಥ ಶೇರೆಗಾರ ಹರಿಹರಪುರ, ಸದಾನಂದ ನಾರಾವಿ, ಹ.ಸು.ಒಡ್ಡಂಬೆಟ್ಟು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಪುಷ್ಪರಾಜ ಶೆಟ್ಟಿ ವಾರ್ತಾಭಾರತಿ, ಸುಧಾ ನಾಗೇಶ್, ಕುಶಾಲಾಕ್ಷಿ ಕುಲಾಲ್ ಕಣ್ವ ತೀರ್ಥ, ಸುಲೋಚನಾ ನವೀನ್, ದಯಾಮಣಿ ಎಸ್. ಶೆಟ್ಟಿ ಎಕ್ಕಾರು, ಮಾಲತಿ ಶೆಟ್ಟಿ ಮಾಣೂರು, ಅರ್ಚನಾ ಇವರು ತಾವೇ ರಚಿಸಿದ ತುಳು – ಕನ್ನಡ ಕವಿತೆಗಳನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸುವರು.
ಈ ಕಾರ್ಯಕ್ರಮವೂ ಅಕ್ಟೋಬರ್ 20ರಂದು ಸೋಮವಾರ ಸಂಜೆ ಗಂಟೆ 4:30ಕ್ಕೆ ಪ್ರಸಾರವಾಗುವುದು ಎಂದು V4 ನ್ಯೂಸ್ ಪ್ರಕಟಿಸಿದೆ.

