ಕೆಮ್ಮಿನ ಸಿರಪ್ ಜೊತೆ ಸರಸ ಬೇಡ

0
40

ಇತ್ತೀಚಿನ ದಿನಗಳಲ್ಲಿ ಕೆಮ್ಮಿನ ಸಿರಪ್ ಬಳಕೆ ಬಹಳ ಜಾಸ್ತಿಯಾಗುತ್ತಿದೆ. ವೈದ್ಯರ ಚೀಟಿ ಇಲ್ಲದೆ ಬಹಳ ಸುಲಭವಾಗಿ ಸಿಗುವ ಕಾರಣದಿಂದ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಜನರು ಟಾನಿಕ್‍ನಂತೆ ಎರ್ರಾಬಿರ್ರಿ ಕುಡಿಯುತ್ತಿದ್ದಾರೆ. ವಿಷಾಂಶಯುಕ್ತ ಮತ್ತು ಕೆಟ್ಟು ಹೋದ ಕೆಮ್ಮಿನ ಸಿರಪ್ ಬಳಸಿ ಕೆಲವು ಮಂದಿ ಮಕ್ಕಳು ಸತ್ತು ಹೋಗಿರುವುದು ಕಳೆದೆರಡು ತಿಂಗಳುಗಳಿಂದ ರಾಷ್ಟ್ರೀಯ ಸುದ್ದಿಯಾಗಿ ಜನರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವ ಜವಾಬ್ದಾರಿ ವೈದ್ಯರಿಗೆ ಇದೆ.

ಕೆಮ್ಮಿನ ಸಿರಪ್‍ನ ಕಟು ಸತ್ಯಗಳು

ಕೆಮ್ಮು ಎನ್ನುವುದು ರೋಗವಲ್ಲ. ಕೆಮ್ಮು ಕೆಲವೊಂದು ಶ್ವಾಸಕೋಶ ಸಂಬಂಧಿ ರೋಗಗಳಲ್ಲಿ ಕಂಡುಬರುವ ರೋಗದ ಲಕ್ಷಣವಾಗಿರುತ್ತದೆ. ಕೆಮ್ಮುವುದು ಶ್ವಾಸಮಾರ್ಗದಲ್ಲಿ ಸೋರಿರುವ ಉರಿಯೂತದ ದ್ರವ, ಸಿಂಬಳ, ಕಫ, ಧೂಳು ಅಥವಾ ಸೋಂಕನ್ನು ನಿವಾರಿಸಲು ಸಹಕರಿಸುತ್ತದೆ. ಕೆಮ್ಮುವ ಪ್ರಕ್ರಿಯೆ ನಿಜವಾಗಿಯೂ ಶ್ವಾಸಕೋಶದ ರಕ್ಷಣೆಗೆ ಇರುವ ಒಂದು ರಕ್ಷಣಾತ್ಮಕ ಪ್ರತಿಕ್ರಿಯೆ ಆಗಿರುತ್ತದೆ. ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವ ಅನೇಕ ರೀತಿಯ ಕೆಮ್ಮುಗಳು ಲಘುವಾದ ವೈರಾಣು ಸೋಂಕಿನಿಂದ ಉಂಟಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಕಷ್ಟು ವಿಶ್ರಾಂತಿ, ದ್ರವಾಹಾರ ಸೇವನೆ ಮತ್ತು ಸಾಕಷ್ಟು ಸಮಯ ನೀಡಿದ್ದಲ್ಲಿ ತನ್ನಿಂತಾನೇ ಗುಣವಾಗುತ್ತದೆ. ಕೆಮ್ಮನ್ನು ಅನವಶ್ಯಕವಾಗಿ ಪ್ರತಿಬಂಧಿಸಿದಲ್ಲಿ ಕೆಲವೊಮ್ಮೆ ರೋಗ ವಾಸಿಯಾಗುವುದು ವಿಳಂಬವಾಗಬಹುದು. ಎಲ್ಲಿ ಹೇಗೆ, ಎಷ್ಟು ಮತ್ತು ಯಾವ ಕೆಮ್ಮಿನ ಸಿರಪ್ ಬಳಸಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಸ್ವಯಂ ಮದ್ದುಗಾರಿಕೆ ಸಹ್ಯವಲ್ಲ. ವೈದ್ಯರ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಬಳಕೆ ಮಾಡಲೇಬಾರದು.

ಕೆಮ್ಮಿನ ಸಿರಪ್ ಬಳಕೆಯಿಂದ ಸೋಂಕಿನಿಂದ ಉಂಟಾದ ಕೆಮ್ಮಿನ ತೀವ್ರತೆಯನ್ನು ಕಡಿಮೆಯಾಗಿಸುತ್ತದೆ. ಆದರೆ ರೋಗಕ್ಕೆ ಕಾರಣವಾದ ಸೋಂಕನ್ನು ನಿವಾರಿಸುವುದಿಲ್ಲ.
ಹೆಚ್ಚಿನ ಕೆಮ್ಮಿನ ಸಿರಪ್‍ಗಳು ಮಕ್ಕಳಿಗೆ ಸುರಕ್ಷಿತವಲ್ಲ. ಕೆಮ್ಮಿನ ಸಿರಪ್‍ಗಳಲ್ಲಿ ಹಲವಾರು ಔಷಧಿಗಳ ಮಿಶ್ರಣ ಇರುತ್ತದೆ. ಕೆಮ್ಮಿನ ಸಿರಪ್‍ನಲ್ಲಿ ಕೋಡಿನ್ ಮತ್ತು ಡೆಕ್ಸ್‍ಟ್ರೊಮೆಥಾರ್ಪೆನ್ ಇದ್ದಲ್ಲಿ ಕೆಮ್ಮನ್ನು ಪ್ರತಿಬಂಧಿಸುತ್ತದೆ.
ಸೋಡಿಯಂ ಮತ್ತು ಪೊಟಾಸಿಯಂ ಸಿಟ್ರೇಟ್ ಇದ್ದರೆ ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಒಣ ಕಫ ಮತ್ತು ಹಸಿ ಕಫಗಳಿಗೆ ಬೇರೆ ಬೇರೆ ಸಿರಪ್ ಲಭ್ಯವಿರುತ್ತದೆ.
ಬ್ರೋಮ್ ಹೆಕ್ಸೇನ್ ಹೈಡ್ರೋ ಕ್ಲೋರೈಡ್ ಅಥವಾ ‘ಆಂಬ್ರೋಕ್ಸೊಲ್ ಹೈಡ್ರೋಕ್ಲೋರೈಡ್ ಅಥವಾ ಶ್ವಾಸಕೋಶವನ್ನು ಹಿಗ್ಗಿಸುವ ಔಷಧಿ ಇದ್ದರೆ ಕಫವನ್ನು ತೆಳ್ಳಗಾಗಿಸುತ್ತದೆ.
ಯಾವ ರೀತಿಯ ಕೆಮ್ಮು, ಕೆಮ್ಮಿನ ಜೊತೆಗಿರುವ ಜ್ವರ, ಉಸಿರಾಟದ ತೊಂದರೆ, ಎದೆನೋವು, ರೋಗಿಯ ವಯಸ್ಸು, ರೋಗಿಯ ತೂಕ ಇವೆಲ್ಲವನ್ನು ಮಂಥಿಸಿ ವೈದ್ಯರು ಯಾವ ರೀತಿಯ ಸಿರಪ್ ಬಳಸಬೇಕು ಎಂದು ನಿರ್ಧರಿಸುತ್ತಾರೆ.
ಅಸಮರ್ಪಕವಾಗಿ ಅಥವಾ ಅಗತ್ಯಕ್ಕಿಂತ ಜಾಸ್ತಿ ಬಳಸಿದ್ದಲ್ಲಿ, ವಾಂತಿ, ತೂಕಡಿಕೆ, ಮತ್ತು ಉಸಿರಾಟದ ಸಮಸ್ಯೆ ಉಂಟಾಗಬಹುದು. ಕೆಲವೊಂದು ಕೆಮ್ಮಿನ ಸಿರಪ್ ಬಳಸಿದ್ದಲ್ಲಿ, ಉಸಿರಾಟದ ವೇಗ ಹೆಚ್ಚಾಗುತ್ತದೆ.
ಕೆಮ್ಮಿನ ಸಿರಪ್‍ಗಳನ್ನು ಪರವಾನಿಗೆ ಇರುವ ವಿಶ್ವಾಸಾರ್ಹ ಫಾರ್ಮಸಿಗಳಿಂದ ಖರೀದಿಸಬೇಕು. ಆನ್‍ಲೈನ್ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿ ಅಗ್ಗವಾಗಿ, ಲೇಬಲ್ ಇಲ್ಲದ, ಆಮದಿತ ಸಿರಪ್ ಬಳಸಿದ್ದಲ್ಲಿ, ಅಪಾಯ ಕಟ್ಟಿಟ್ಟ ಬುತ್ತಿ. ಕಲಬೆರಕೆ ಅಥವಾ ಅವಧಿ ಮೀರಿದ ಕೆಮ್ಮಿನ ಸಿರಪ್ ಬಳಸಿದ್ದಲ್ಲಿ ಮೂತ್ರಪಿಂಡ ವೈಫಲ್ಯ ಅಥವಾ ಬಹು ಅಂಗಾಂಗ ವೈಫಲ್ಯ ಉಂಟಾಗಬಹುದು.
ರೋಗಿ ಅಸ್ತಮಾ ಅಥವಾ ಇನ್ನಾವುದೇ ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ಕೆಮ್ಮಿನ ಸಿರಪ್ ಬಹಳ ಜಾಗರೂಕತೆಯಿಂದ ಬಳಸತಕ್ಕದ್ದು.
ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಬರೀ ಕೆಮ್ಮು ಮಾತ್ರ ಇದ್ದಲ್ಲಿ, ಲಘು ವೈರಾಣು ಸೋಂಕು ಇದ್ದಲ್ಲಿ, ಕೆಮ್ಮಿನ ಸಿರಪ್ ಬಳಕೆಯನ್ನು ಮಾಡದೇ ಇರುವುದು ಉತ್ತಮ.
ಪಕ್ಕದ ಮನೆಯವರಿಂದ, ಮನೆಯಲ್ಲಿಯೇ ಈ ಹಿಂದ ಬಳಸಿ, ಉಳಿಸಿದ ಸಿರಪ್‍ಗಳ ಬಳಕೆ ಮಾಡಲೇಬಾರದು.
ನಿಮ್ಮ ಮಗು ವಿಪರೀತ ಜ್ವರ, ಉಸಿರಾಟದ ತೊಂದರೆ ಮತ್ತು ಕೆಮ್ಮು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಸೂಕ್ತ ಔಷಧಿ ಪಡೆಯಿರಿ. ಮನೆಯಲ್ಲಿಯೇ ಮನೆಮದ್ದು ಮಾಡಿ, ಕೆಮ್ಮಿನ ಸಿರಪ್ ಬಳಸುವುದು ಅಪಾಯಕಾರಿ.
ಕೊನೆ ಮಾತು.

ಸಣ್ಣಪುಟ್ಟ ಕೆಮ್ಮಿಗೆ ಮನೆ ಮದ್ದುಗಳಾದ ಜೇನುತುಪ್ಪ ಸೇವನೆ, ಬಿಸಿ ಹಬೆ ಸೇವನೆ ಮತ್ತು ತೇವಾಂಶಭರಿತ ಗಾಳಿಸೇವನೆ ಸೂಕ್ತ.
ಸಾಕಷ್ಟು ದ್ರವಗಳ ಸೇವನೆ ಮತ್ತು ಬೆಚ್ಚಗಿನ ಪಾನೀಯ ಸೇವಿಸುವುದರಿಂದ ಕೆಮ್ಮಿನಿಂದ ಮುಕ್ತಿ ಸಿಗಬಹುದು.

ಡಾ ಮುರಲೀ ಮೋಹನ್ ಚೂಂತಾರು.
ಮಂಗಳೂರು.
9845135787

LEAVE A REPLY

Please enter your comment!
Please enter your name here