ಪುಣ್ಯ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರಬೇಡಿ-ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮನವಿ

0
37

ಹೆಬ್ರಿ : ಸುಮಾರು ೭೦೦ ವರ್ಷಗಳ ಹಿಂದಿನ ತುಳುನಾಡಿನ ಪುಣ್ಯಸ್ಥಳ ಪ್ರಸಿದ್ಧ ಕ್ಷೇತ್ರ ಶ್ರೀ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ಕೆಲವೊಂದು ಪಟ್ಟಾಭದ್ರ ಹಿತಾಸಕ್ತಿಗಳ ಗುಂಪು ಸುಳ್ಳು ಷಡ್ಯಂತ್ರ ಹೂಡಿ ಕ್ಷೇತ್ರ, ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವುದು ವಿಷಾಧನೀಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಈ ಹಿಂದೆ ಹೊಯ್ಸಳರು, ವಿಜಯನಗರ ಸಾಮ್ರಾಜ್ಯದವರು, ಕೆಳದಿ, ಮೈಸೂರು ಸಂಸ್ಥಾನ, ಮೊಗಲರು, ಬ್ರಿಟಿಷರು ಮತ್ತು ಕಳೆದ ೭೫ ವರ್ಷಗಳ ಪ್ರಜಾಪ್ರಭುತ್ವ ಆಡಳಿತವು ಶ್ರೀಕ್ಷೇತ್ರದ ಧರ್ಮ ನ್ಯಾಯವನ್ನು ಮೆಚ್ಚಿ ಪುರಸ್ಕರಿಸುತ್ತ ಬಂದಿದೆ. ನಾಡಿನ ಎಲ್ಲಾ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ತಂದು ನಾವೆಲ್ಲ ಮಾನವ ಧರ್ಮದವರು, ಮತ್ತು ಮಾನವೀಯ ಮೌಲ್ಯವನ್ನು ಅರಿತು ಬೆರೆತು ಬಾಳಬೇಕೆಂಬುದು ಸಾರಿದ ಪುಣ್ಯಕ್ಷೇತ್ರ ಧರ್ಮಸ್ಥಳದ ಸಂದೇಶವಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ತುಳುನಾಡಿನ ಅನೇಕ ದೇವಪುರುಷರು, ವೀರಕಲ್ಕುಡ, ಕೊಡ್ದಬ್ಬು, ಕೋಟಿಚೆನ್ನಯರು, ಅಣ್ಣಪ್ಪ ಪಂಜುರ್ಲಿ ಇಂದು ತುಳುನಾಡಿನ ಶಕ್ತಿಯಾಗಿ ಆರಾಧ್ಯ ದೈವಗಳಾಗಿ ಸರ್ವರಿಂದ ಪೂಜಿಸ್ಪಡುತ್ತಿದ್ದು, ತಮ್ಮ ದೈವರಾಧನೆಯ ನುಡಿಕಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ತೀರ್ಮಾನವೇ ನಮ್ಮ ತೀರ್ಮಾನ ಎಂದು ನುಡಿ ನೀಡುತ್ತಿರುವುದು ಪುಣ್ಯ ಕ್ಷೇತ್ರ ಧರ್ಮಸ್ಥಳದ ಕಾರಣೀಕ ಶಕ್ತಿಯಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಪುಣ್ಯ ಕ್ಷೇತ್ರ ಧರ್ಮಸ್ಥಳವನ್ನು ನಮ್ಮ ನಾಡಿನ ಹಿರಿಯರು, ನಮ್ಮ ಮನೆದೇವರು, ಗ್ರಾಮದೇವರಾಗಿ ಆರಾಧಿಸುವ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಿಬೆಳೆಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ. ಶ್ರೀಕ್ಷೇತ್ರ, ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕಿಡಿಗೇಡಿಗಳು ಮಾಡುವ ಆಧಾರ ರಹಿತ ಆರೋಪಗಳಿಗೆ ಕಿವಿಗೊಡದೆ ಧಾರ್ಮಿಕ ನಂಬಿಕೆಯಲ್ಲಿ ಬದುಕುವ ಉಭಯ ಜಿಲ್ಲೆಯ ಪ್ರಜ್ಞಾವಂತರು ಎಚ್ಚರ ವಹಿಸಿ ಕ್ಷೇತ್ರದ ಬಗ್ಗೆ ನಡೆಯುವ ಅಪಪ್ರಚಾರವನ್ನು ಖಂಡಿಸುವಂತೆ ನೀರೆ ಕೃಷ್ಣ ಶೆಟ್ಟಿ ಸರ್ವರಲ್ಲಿಯೂ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here