ಮೆಕ್ಸಿಕೋ : ಸಮುದ್ರದ ಆಳದಲ್ಲಿ ವಾಸಿಸುವ, ಅತೀ ಅಪರೂಪದ ಮತ್ತು ನಿಗೂಢ ಎನ್ನಲಾದ ಎರಡು ಓರ್‌ಫಿಶ್ ಮೀನುಗಳು ಮೆಕ್ಸಿಕೋದ ಕ್ಯಾಬೊ ಸ್ಯಾನ್ ಲ್ಯೂಕಾಸ್ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಜಪಾನಿನ ಜಾನಪದ ನಂಬಿಕೆಗಳ ಪ್ರಕಾರ, ಈ ಮೀನುಗಳು ಕಾಣಿಸಿಕೊಂಡರೆ ಅದು ಮುಂಬರುವ ಭೀಕರ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ಎಂದು ನಂಬಲಾಗಿದ್ದು, ಇದನ್ನು ‘ಡೂಮ್ಸ್‌ಡೇ ಫಿಶ್’ ಅಥವಾ ‘ಪ್ರಳಯದ ಮೀನು’ ಎಂದು ಕರೆಯಲಾಗುತ್ತದೆ.
ಮೋನಿಕಾ ಪಿಟ್ಟಿಂಗರ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ರಿಬ್ಬನ್ ಆಕಾರದ ಎರಡು ದೈತ್ಯ ಮೀನುಗಳು ಸಮುದ್ರದ ಆಳವಿಲ್ಲದ(ದಡದ ಅಂಚಿನಲ್ಲಿ) ನೀರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಸಮುದ್ರದ ಸುಮಾರು 3,000 ಅಡಿಗಳಷ್ಟು ಆಳದಲ್ಲಿ ಜೀವಿಸುವ ಈ ಮೀನುಗಳು ಕರಾವಳಿಗೆ ಬಂದಿರುವುದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ.

