“ಕಾರ್ಮೋಡದಂಚಲ್ಲೂ ನಗೆಮಿಂಚಿ ಜಗ ಬೆಳಗಿದ ಸುವರ್ಣ ಸೂರ್ಯ“
ಶ್ರೀರಾಮನ ಔನ್ನತ್ಯ ಲೋಕಪ್ರಕಾಶ ಗೊಂಡಿದ್ದು ಆದಿಕವಿ ವಾಲ್ಮೀಕಿಯವರ ದೇವಕಾವ್ಯದಲ್ಲಿ , ಗೀತೆಯನ್ನು ನಾವು ನೀವೂ ಇಂದಿಗೂ ಕೇಳುತ್ತಿರುವುದು ಭಗವಾನ್ ವ್ಯಾಸ ಮಹರ್ಷಿಗಳ ದಿವ್ಯವಾಣಿಯಲ್ಲಿ . ಅಂತೆಯೇ ತುಳು ಕನ್ನಡಿಗರ ಮನಮನೆಯ ತೂಗುದೀಪ , ಸಾಮಾಜಿಕ ಕಳಕಳಿಯ ಹರಿಕಾರ , ಬತ್ತದ ಯುವಶಕ್ತಿಯ ಚಿಲುಮೆಯ ಜೀವನ ಜಾತ್ರೆಯ ಸಂಭ್ರಮದ ನಿತ್ಯಗಾಥೆ ಸಾಕಾರಗೊಂಡಿದ್ದು ಡಾ . ಅನಿತಾ .ಪಿ. ತಾಕೊಡೆಯವರ ‘ಸುವರ್ಣಯುಗ’ದಲ್ಲಿ. ಈ ಮಾತು ಕೇಳಿದಾಗ ಕೊಂಚ ಅತಿಶಯೋಕ್ತಿ ಏನಿಸಿದರೂ , ಪೂರ್ಣ ಪುಸ್ತಕ ಓದಿದ ಮೇಲೆ , ಹೌದಲ್ಲ ! ಎಂದು ಅನ್ನಿಸದಿರದು.
ನೇರವಾಗಿ ಹೇಳಬೇಕೆಂದರೆ , ತಲೆಗೂದಲು ನರೆತಂತೆಲ್ಲಾ ಆತ್ಮಕಥೆ , ಜೀವನ ಚರಿತ್ರೆಗಳನ್ನು ಓದುವ ಸ್ವಾರಸ್ಯ ಕಡಿಮೆಯಾಗುತ್ತಾ ಬರುತ್ತದೆ. ಕೆಲವು ವಿಶೇಷ ಘಟನೆಗಳನ್ನು ಹೊರತು ಪಡಿಸಿದರೆ ; ಅದೇ ಬಾಲ್ಯ ಸಂಘರ್ಷ, ಯೌವನದ ಆದರ್ಶ, ಸುಳಿನೀರಿನಲೆಗಳ ದಾಟಿ ಎದ್ದು ನಿಲ್ಲುವ , ಲೋಕ ಮಾದರಿಯಾಗುವ ವ್ಯಕ್ತಿತ್ವ. ಎಲ್ಲಾ ಮಹಾ ಚೇತನಗಳ ಕಥೆಯಲ್ಲಿ ಕಾಣಬರುವ ಸಾಮಾನ್ಯ ಒಳತಂತು ಇದೇ.
ಬೆಂಗಳೂರಿನ ಲ್ಲಿರುವ, ನನಗೆ ದೂರದ ಸ್ನೇಹಿತರ ಮೂಲಕ ಆಕಸ್ಮಿಕವಾಗಿ ಕೈ ಸೇರಿದ ‘ಸುವರ್ಣಯುಗ’ ದ ಮೊದಲ ಪುಟ ನಾನು ತೆರೆದದ್ದು , ಲೇಖಕಿಯವರು ನನ್ನ ಬಹು ಪರಿಚಿತ ಸಾಹಿತ್ಯಸಖಿಯೆಂಬ ಒಂದೇ ಕಾರಣದಿಂದ.
ಆದರೆ ಕ್ರಮೇಣ ಸಾಲು ಸಾಲು , ಪುಟ ಪುಟ , ಅಧ್ಯಾಯಗಳು ತಿರುವಿದಂತೆಲ್ಲಾ ಅನಾವರಣಗೊಳ್ಳುತ್ತಿದ್ದ ಸರ್ವಾಪ್ತ ಸುಜೀವಿ , ಎಲ್ಲರ ನೆಚ್ಚಿನ ‘ಜಯಣ್ಣ ‘ ನವರ ವಿಶ್ವರೂಪ ದರ್ಶನದ ಪರಿಯೇ ‘ ಅಬ್ಬಬ್ಬಾ , ಅದ್ಭುತ’ !
ಡಾಕ್ಟರೇಟ್ , ಪಿ ಹೆಚ್ ಡಿ ತಕ್ಕಡಿಯಲ್ಲಿ ತೂಗಬಹುದಾದ ಮಹಾಜೀವನವನ್ನು , ಅದು ಸರ್ವಸದಾ ಬಾಳಿದ ಸರಳತೆಯ ಮಾದರಿಯಲ್ಲಿಯೇ ಪ್ರಾಥಮಿಕ ಮಕ್ಕಳ ಮನಸ್ಸಿಗೂ ಮುಟ್ಟಬಹುದಾದ ಸರಳ ಭಾಷೆಯಲ್ಲಿ ಹೇಳಿರುವ ಲೇಖಕಿಯರ ನೈಜಭಾವ ಭಾಷಾ ಪ್ರಾವೀಣ್ಯತೆ ವಿಸ್ಮಯಕಾರಿ.
ಏದುಸಿರಿಲ್ಲದೆ ಸುವರ್ಣಮೇರು ಪರ್ವತವೇರಿಳಿದ ಇವರ ವರ್ಣನಾ ಲಾಘವ ಬಹು ಶ್ಲಾಘನೀಯ. ಲೇಖಕಿಯವರು ಸ್ವಭಾವತಃ ಹಲವಾರು ಭಾವ ಕವನ ಸಂಕಲನಗಳ ‘ ಕವಿ ಹೃದಯಿಗಳು ಹಾಗೂ ಸೂಕ್ಷ ಸಂವೇದನೆಗಳ ಸಾಕಾರಮೂರ್ತಿ ಸ್ತ್ರೀ ‘ ಆಗಿರುವುದು ಈ ವಿಶೇಷತೆಯೇ ಮೂಲವಾಗಿರಬಹುದು . ಕಡಲೆಕಾಯಿ ಪಾಂಡಿತ್ಯದ ಕೈಗಳಿಗೆ ಈ ಮಟ್ಟದ ಸಾರ್ಥಕತೆ ಗಗನ ಕುಸುಮವೇ ಸರಿ !
ಒಟ್ಟಾರೆ ಹೇಳುವುದಾದರೆ , ನಮ್ಮ ನಿಮ್ಮ ನಡುವೆ ಅರಳಿ ಬಾಳಿದ , ಸ್ನೇಹ- ಪ್ರೀತಿಯ ಸೌರಭ ಸುಗಂಧ ಸೂಸಿದ ಒಂದು ದಿವ್ಯಚೇತನದ ಭವ್ಯ ಕಥೆಯನ್ನು , ವನಸುಮದ ವಿಕಸಿತವನ್ನಾಗಿಸದೆ , ಮನೆ- ಮನಗಳ ಬೆಳಗು ದೀಪವನ್ನಾಗಿಸಿ , ಮುಂದಿನ ನೂರಾರು, ಸಾವಿರಾರು ಬದುಕುಗಳಿಗೆ ಸ್ಪೂರ್ತಿಯ ಚಿಲುಮೆಯಾಗುವಂತೆ ಶಾಶ್ವತಶಿಲ್ಪವನ್ನು ಕಟ್ಟಿಕೊಟ್ಟ ಶ್ರೀಮತಿ . ಅನಿತಾ .ಪಿ. ತಾಕೊಡೆಯವರಿಗೆ , ಸಮಸ್ತ ಕನ್ನಡ ಸಾಹಿತ್ಯ ಬಂಧುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅಭಿವಂದನೆಗಳು . ಅವರ ಸಧಭಿರುಚಿಯ ಸಾಹಿತ್ಯ ದಾಸೋಹ ಬಹುಕಾಲ ಹೀಗೆಯೇ ಸಾಗಿ , ಮತ್ತಷ್ಟು , ಮಗದಷ್ಟು ತಾರೆಗಳು ಸಜ್ಜನ ಮನದಾಗಸದಲ್ಲಿ ಮಿನುಗುವಂತಾಗಲೆಂದು ಸಸ್ನೇಹಪೂರ್ವಕವಾಗಿ ಹಾರೈಸುತ್ತೇನೆ.
-✍🏻ಡಾ. ದೇವಾನಂದ
( ಮುಖ್ಯ ಚಿಕಿತ್ಸಾಧಿಕಾರಿ , ಆರೋಗ್ಯ ಇಲಾಖೆ ,ಭಾರತ ಸರ್ಕಾರ )